February 4, 2026
IMG-20251017-WA0316

ಮಂಗಳೂರು: ಗಲ್ಫ್ ರಾಷ್ಟ್ರದಲ್ಲಿ ಉದ್ಯಮಿಯಾಗಿರುವ ಕೇರಳ ಮೂಲದ ವ್ಯಕ್ತಿಯನ್ನು ಮದುವೆಗೆ ಹೆಣ್ಣು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್ ಮಾಡಿದ್ದು, ಈ ಬಗ್ಗೆ ದೂರು ಕೊಟ್ಟು ಎಫ್ಐಆರ್ ದಾಖಲಾಗಿ ವಾರ ಕಳೆದರೂ ವಿಟ್ಲ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ. ಕಡಂಬು ಬಶೀರ್ ಮತ್ತು ಮಾಣಿ ಸೆಪಿಯಾ ಎಂಬವರ ಮೇಲೆ ಹಲವಾರು ಕೇಸುಗಳಿದ್ದು ಹನಿಟ್ರ್ಯಾಪ್ ದಂಧೆಯನ್ನೇ ಮಾಡುತ್ತಿದ್ದಾರೆ. ಪೊಲೀಸರಲ್ಲಿ ಪ್ರಶ್ನಿಸಿದರೆ, ಆರೋಪಿಗಳಿಗೆ ವಿಚಾರಣೆಗೆ ಬರಲು ನೋಟಿಸ್ ಕೊಟ್ಟಿದ್ದೇವೆಂದು ಅಸಹಾಯಕತೆ ತೋರುತ್ತಾರೆ ಎಂದು ಸಂತ್ರಸ್ತ ವ್ಯಕ್ತಿಯ ಪರ ವಕೀಲೆ ಸೌದಾ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು, ಕೇರಳ ಮೂಲದ ಗಲ್ಫ್ ಉದ್ಯಮಿಯೊಬ್ಬರಿಗೆ ಬಂಟ್ವಾಳದ ಹನಿಟ್ರ್ಯಾಪ್ ತಂಡವೊಂದು ಮೋಸ ಮಾಡಿ 44.80 ಲಕ್ಷ ರೂ.ಗಳನ್ನು ವಂಚಿಸಿರುವ ಪ್ರಕರಣದ ವಿವರ ನೀಡಿದರು.

ಕೇರಳ ನಿವಾಸಿ, 53ರ ಹರೆಯದ ಮುಹಮ್ಮದ್ ಅಶ್ರಫ್ ತಾವರಕಡನ್ ಎಂಬವರು ಸೌದಿಯಲ್ಲಿ ಉದ್ಯೋಗದಲ್ಲಿದ್ದು, ಅವರಿಗೆ ಬಶೀರ್ ಕಡಂಬು, ಸಫಿಯಾ ಮಾಣಿ ಮತ್ತು ಇತರ ಆರೋಪಿಗಳು ಸೆ.24ರಂದು ಮಂಗಳೂರಿಗೆ ಕರೆಸಿ ಹೆಣ್ಣು ತೋರಿಸುವ ನೆಪದಲ್ಲಿ ಫೋಟೋ ವಿಡಿಯೋ ಮಾಡಿಸಿ ಬಳಿಕ ಹಣಕ್ಕಾಗಿ ಬೆದರಿಕೆ ಒಡ್ಡಿದ್ದಾರೆ. ವಿವಾಹಿತರಾಗಿರುವ ಅಶ್ರಫ್ ವೀಡಿಯೋ ಬಹಿರಂಗವಾಗುತ್ತದೆ ಎಂಬ ಭಯದಿಂದ 44.80 ಲಕ್ಷ ರೂ.ಗಳನ್ನು ಆರೋಪಿಗಳ ವಿವಿಧ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದ್ದಾರೆ. ಈ ಮಧ್ಯೆ ಅಶ್ರಫ್ ಅವರ ಪತ್ನಿಗೂ ಬೇರೆಯವರ ಅಶ್ಲೀಲ ವೀಡಿಯೋವೊಂದನ್ನು ಕಳುಹಿಸಿ ಹಣ ನೀಡದಿದ್ದರೆ ನಿಮ್ಮ ಪತಿಯ ಇಂತಹ ವೀಡಿಯೋ ಬಹಿರಂಗಪಡಿಸುವುದಾಗಿ ಬೆದರಿಸಿದ್ದಾರೆ. ಇದರಿಂದ ಕಳೆದ ವಾರ ವಿಟ್ಲ ಪೊಲೀಸ್ ಠಾಣೆಗೆ ಆಗಮಿಸಿ ಅಶ್ರಫ್ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಒಂದು ವಾರ ಆದರೂ ಆರೋಪಿಗಳ ಬಂಧನವಾಗಿಲ್ಲ. ಪ್ರಕರಣ ದಾಖಲಿಸಲು ಪೊಲೀಸ್ ಠಾಣೆಯಲ್ಲಿ ಸಾಕಷ್ಟು ತೊಂದರೆಯಾಗಿತ್ತು. ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳ ಮುತುವರ್ಜಿಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಸಂತ್ರಸ್ತ ಅಶ್ರಫ್ ರಿಗೆ ನ್ಯಾಯ ದೊರೆಯಬೇಕಿದೆ ಎಂದು ಸೌದಾ ಹೇಳಿದರು.

ಆರೋಪಿ ಸಫಿಯಾ ಎಂಬವರು 2010ರಿಂದಲೂ ಹನಿಟ್ರ್ಯಾಪ್ ನಂತಹ ಕೃತ್ಯಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಇಂತಹ ಹಲವು ತಂಡಗಳು ಸಕ್ರಿಯವಾಗಿದ್ದು, ಉದ್ಯಮಿಗಳನ್ನು ತಮ್ಮ ಬಲೆಗೆ ಹಾಕಿಕೊಂಡು ಹಣ ದೋಚುವ ಕಾರ್ಯ ನಡೆಸುತ್ತಿವೆ. ಈ ಬಗ್ಗೆ ರಾಜ್ಯ ಸರಕಾರ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ಸೌದಾ ಒತ್ತಾಯಿಸಿದರು.

ಪ್ರಕರಣಕ್ಕೆ ಸಂಬಂಧಿಸಿ ಕೆಲ ಸಮುದಾಯದ ನಾಯಕರು ಮುಂದೆ ಬಂದು ತಡೆಯಲು ಪ್ರಯತ್ನಿಸಿದ್ದಾರೆ. ಈ ಬಗ್ಗೆಯೂ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂತ್ರಸ್ತ ಮುಹಮ್ಮದ್ ಅಶ್ರಫ್, ಅಬ್ದುಲ್ ರಝಾಕ್ ಉಪಸ್ಥಿತರಿದ್ದರು.