February 4, 2026

ಸಂವಿಧಾನ ಬರೆದಿದ್ದು ಅಂಬೇಡ್ಕರ್, ಬರೆಸಿದ್ದು ನೆಹರು

ಮಂಗಳೂರು : ಬಿಜೆಪಿ ಮತ್ತು ಬಲಪಂಥೀಯರ ಹಿಂದುತ್ವ ಸಿದ್ಧಾಂತಕ್ಕೆ ವಿರುದ್ಧವಾಗಿ ಕಾಂಗ್ರೆಸ್ ಮತ್ತು ಜಾತ್ಯಾತೀತರು ಸಂವಿಧಾನವನ್ನು ಸಿದ್ಧಾಂತ ಮಾಡಿಕೊಳ್ಳಬೇಕು, ಹಿಂದುತ್ವ ಸಿದ್ಧಾಂತವನ್ನು ಸಂವಿಧಾನ ಎಂಬ ಸಿದ್ಧಾಂತದ ಮೂಲಕ‌ ಎದುರಿಸಬೇಕು ಎಂದು ಹಿರಿಯ ಪತ್ರಕರ್ತರಾದ ವಿಚಾರವಾದಿ ದಿನೇಶ್ ಅಮೀನ್ ಮಟ್ಟು ಹೇಳಿದರು.

ನಗರದ ಉರ್ವದಲ್ಲಿರುವ ಅಂಬೇಡ್ಕರ್ ಭವನದಲ್ಲಿ ನೆಹರು ವಿಚಾರ ವೇದಿಕೆ ಮಂಗಳೂರು ಇವರು ಆಯೋಜಿಸಿದ ಗಾಂಧಿ-ಅಂಬೇಡ್ಕರ್-ನೆಹರು ಕುರಿತ ಸ್ವಾತಂತ್ರ್ಯ-ಸಂವಿಧಾನ-ದೂರದೃಷ್ಟಿ ಎಂಬ ವಿಷಯದಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ‌ ಸಂವಿಧಾನ ಅನುಷ್ಠಾನವಾಗಲು ಕಾಂಗ್ರೆಸ್ ಪಕ್ಷವೇ ಕಾರಣ, ಅಂಬೇಡ್ಕರ್ ಸಂವಿಧಾನ ಬರೆದರು, ನೆಹರು ಬರೆಸಿದರು, ಸಂವಿಧಾನವೇ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಆಗಬೇಕು,‌ ಒಂದು ಸಿದ್ಧಾಂತವನ್ನು ಮತ್ತೊಂದು‌ ಸಿದ್ಧಾಂತದ ಮೂಲಕವಷ್ಟೇ ಎದುರಿಸಬೇಕು, ಅದನ್ನು ತ್ರಿಶೂಲ‌ ಕತ್ತಿ ದೊಣ್ಣೆಗಳಿಂದ ಎದುರಿಸಲು‌ ಆಗುವುದಿಲ್ಲ ಎಂದರು.

ಇದೇ ವೇಳೆ ಕಾಂಗ್ರೆಸ್ ನಾಯಕರ ಮೃದು ಹಿಂದುತ್ವ ಸಿದ್ಧಾಂತ ಮತ್ತು ಹೊಂದಾಣಿಕೆ ರಾಜಕಾರಣದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು ಕಾಂಗ್ರೆಸಿಗರು ಕೂಡ ನಾಮ ಬಳಿದು, ಶಾಲು ಹಾಕಿಕೊಂಡು ಮೃದು ಹಿಂದುತ್ವ ತೋರ್ಪಡಿಸಿದರೆ ಕರಾವಳಿಯಲ್ಲಿ ಚುನಾವಣೆ ಗೆಲ್ಲಲು ಕಾಂಗ್ರೆಸ್‌ಗೆ ಸಾಧ್ಯವಿಲ್ಲ ಎಂದರು. ಸತೀಶ್ ಜಾರಕಿಹೊಳಿ ಥರ ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸುವ ತಾಕತ್ತು ಬೇರೆ ಯಾವ ನಾಯಕನಿಗಿದೆ ಮತ್ತು ಆರ್ ಎಸ್ ಎಸ್ ಗೆ ಹೆದರುವುದಿದ್ದರೆ ನೀವು ಕಾಂಗ್ರೆಸ್ ತೊರೆದು ಹೋಗಿ ಎಂದು ಹೇಳುವ ರಾಹುಲ್ ಗಾಂಧಿಯ ಎದೆಗಾರಿಕೆ ಎಷ್ಟು ಕಾಂಗ್ರೆಸ್ ನಾಯಕರಲ್ಲಿದೆ ಎಂದು ಅವರು ಪ್ರಶ್ನಿಸಿದರು.

ಅಂಬೇಡ್ಕರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಹಾಕಿ ಸೋಲಿಸಿತು ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದ ಅವರು ಅಂದು ಅಂಬೇಡ್ಕರ್ ವಿರುದ್ಧ ಕೇವಲ ಕಾಂಗ್ರೆಸ್ ಮಾತ್ರ ಅಭ್ಯರ್ಥಿ ಹಾಕಿರಲಿಲ್ಲ, ಹಿಂದೂ‌ಮಹಾಸಭಾ ಮತ್ತು ಕಮ್ಯುನಿಸ್ಟ್ ಪಾರ್ಟಿಯೂ‌ ಅಭ್ಯರ್ಥಿ ಹಾಕಿತ್ತು. ಹಿಂದೂ‌ಮಹಾಸಭಾ ಮತ್ತು ಕಮ್ಯುನಿಸ್ಟರು ಅಂಬೇಡ್ಕರ್ ಅವರನ್ನು ಸೋಲಿಸಿದರು ಎಂದು ಏಕೆ ಹೇಳುವುದಿಲ್ಲ ಚುನಾವಣೆಯಲಿ‌ ಸೋತಿದ್ದ ಅಂಬೇಡ್ಕರ್ ಅವರನ್ನು ಕರೆತಂದು‌ ಕಾನೂನು‌ ಸಚಿವರನ್ನಾಗಿ ಮಾಡಿ ಸಂವಿಧಾನ ಬರೆಸಿದ್ದು ನೆಹರು ಎಂದರು.

ಅಂಬೇಡ್ಕರ್ ಮನಸ್ಮೃತಿ ಸುಟ್ಟಾಗ ಅದು ಬೂದಿಯಾಗಿದೆ, ಆದರೆ ಆ ಬೂದಿಯಿಂದ ಮತ್ತೆ ಮನುಸ್ಮೃತಿ ಹುಟ್ಟಿಕೊಳ್ಳುತ್ತಿದೆ ಎಂದು ಅವರು ಎಚ್ಚರಿಸಿದರು.

ವಿಚಾರಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಬ್ರಿಜೇಶ್ ಕಾಳಪ್ಪ, ಭಾರತ ದೇಶದ ನಿರ್ಮಾಣಕ್ಕೆ ತಳಹದಿ ಹಾಕಿದ ಮೂರು ಮಹನಿಯರು ಗಾಂಧಿ, ಅಂಬೇಡ್ಕರ್, ನೆಹರು ಎಂದರು. ನಮ್ಮ ದೇಶದ ತಳಹದಿ ಅಹಿಂಸೆಯಲ್ಲಿರಬೇಕು, ಹಿಂಸೆಯಲ್ಲಿರಬಾರದು ಎಂದು ಗಾಂಧಿಜಿ ಹೇಳಿದ್ದರು, ಧರ್ಮದ ಆಧಾರದಲ್ಲಿ‌ ಕಟ್ಟಿದ್ದ ದೇಶಗಳು ಇಂದು ಹಾಳಾಗಿದೆ, ಭಾರತವನ್ನು ಧರ್ಮದ ತಳಹದಿಯಲ್ಲಿ‌ ಕಟ್ಟಿದ್ದರೆ ಇಂದು ನಮ್ಮ ದೇಶ ಮತ್ತೊಂದು‌ ಪಾಕಿಸ್ತಾನ ಆಗಿರುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟರು.

ನೆಹರು ಮತ್ತು ಅಂಬೇಡ್ಕರ್ ನಡುವೆ ವೈಮನಸ್ಸಿತ್ತು ಎಂದು ಅಪಪ್ರಚಾರ ನಡೆಸಲಾಗುತ್ತಿದೆ ಎಂದ ಅವರು, 1949ರಲ್ಲಿ ಕಾನೂನು ಮಂತ್ರಿಯಾಗಿದ್ದ ಅಂಬೇಡ್ಕರ್ ಅವರು ಹಿಂದೂ ಕೋಡ್ ಬಿಲ್ ಮಂಡಿಸಿದಾಗ ಕ್ಯಾಬಿನೆಟ್‌ನಲ್ಲಿದ್ದ ಶ್ಯಾಂ‌ ಪ್ರಸಾದ್ ಮುಖರ್ಜಿಯವರು ಈ ಮಸೂದೆಯಿಂದ ಹಿಂದೂಗಳಿಗೆ ಸಮಸ್ಯೆ ಆಗುತ್ತೆ ಎಂದು ನೆಹರು ಬಳಿ ವಿರೋಧ ವ್ಯಕ್ತಪಡಿಸಿದ್ದರು, ಶ್ಯಾಂ ಪ್ರಸಾದ್ ಮುಖರ್ಜಿಯವರ ವಿರೋಧದ ಕಾರಣಕ್ಕೆ ಆ ಬಿಲ್ ಬಿದ್ದುಹೋಯಿತು, ಬಳಿಕ ನೆಹರು ಅವರು ಹಿಂದೂ ಧರ್ಮೀಯರಿಗೆ ಸಂಬಂಧಿಸಿ ಜಾರಿಗೆ ತಂದ ನಾಲ್ಕು ಪ್ರಮುಖ ಕಾಯ್ದೆಗಳಲ್ಲಿ ಅಂಬೇಡ್ಕರ್ ಅವರ ಹಿಂದೂ ಕೋಡ್ ಬಿಲ್‌ನಲ್ಲಿದ್ದ ಬಹುತೇಕ ಅಂಶಗಳನ್ನು ಸೇರಿಸಿದ್ದರು. ನೆಹರು ಜಾರಿಗೆ ತಂದ ಆ ಕಾಯ್ದೆಗಳನ್ನು ಸ್ವತಃ ಅಂಬೇಡ್ಕರ್ ಅವರೇ ಹಾಡಿಹೊಗಳಿದ್ದರು ಎಂದು ನೆನಪಿಸಿದರು.

ನೆಹರು ಬದಲಿಗೆ ಪಟೇಲ್ ಪ್ರಧಾನಿಯಾಗಬೇಕಿತ್ತು ಎಂದು ಹೇಳುವ ಬಿಜೆಪಿಗರು ಮೋದಿ ಬದಲು ಅಡ್ವಾಣಿ, ಗಡ್ಕರಿ, ನಡ್ಡಾ ಅವರನ್ನು ಪ್ರಧಾನಿಯಾಗಬೇಕು ಎಂದು ಹೇಳುವುದಿಲ್ಲ, ಇನ್ಮುಂದೆ ನೆಹರು ಯಾಕೆ ಪ್ರಧಾನಿಯಾದರು ಎಂದು ಬಿಜೆಪಿಗರು ಕೇಳಿದರೆ ಅಡ್ವಾಣಿ ಯಾಕೆ ಪ್ರಧಾನಿ ಆಗಿಲ್ಲ, ಗಡ್ಕರಿ ಅವರನ್ನು ಯಾಕೆ ಪ್ರಧಾನಿ ಮಾಡಲ್ಲ‌ ಎಂದು ನಾವು ಮರುಪ್ರಶ್ನೆ ಮಾಡಬೇಕು ಎಂದರು.

ಉದ್ಘಾಟನಾ ಭಾಷಣ ಮಾಡಿದ ಸತೀಶ್ ಜಾರಕಿಹೊಳಿ, ಗಾಂಧಿ ಅಂಬೇಡ್ಕರ್ ನೆಹರು ನಮಗೆ ಆದರ್ಶ ಎಂದರು. ದಕ್ಷಿಣ ಕನ್ನಡ ಮತ್ತು‌ ಉಡುಪಿ‌ ಜಿಲ್ಲೆಯಲ್ಲಿ ಗಾಂಧಿ ಅಂಬೇಡ್ಕರ್ ನೆಹರು ಅವರ ಬಗ್ಗೆ ಹೆಚ್ಚು ಪ್ರಚಾರ ಮಾಡುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು. ಇತಿಹಾಸದ ಪುಟದಿಂದ ಈ ಮೂವರು ಮಹನಿಯರನ್ನು ಮರೆಮಾಚಲು ಅವರನ್ನು ಪದೇ ಪದೇ ಅವಮಾನಿಸಲಾಗುತ್ತಿದೆ ಎಂದು ಹೇಳಿದರು.

ವಿಚಾರಗೋಷ್ಠಿಯಲ್ಲಿ ಮಾಜಿ‌ ಸಚಿವ ರಮಾನಾಥ ರೈ, ಕೆಪಿಸಿಸಿ ಮುಖಂಡ ಮುನೀರ್ ಜೈಸಾಲೆ, ಪುತ್ತೂರು ಶಾಸಕ ಅಶೋಕ್‌ ರೈ, ವಿಚಾರವಾದಿ ಅನಂತ್ ನಾಯಕ್, ಸಿಪಿಎಂ ಮುಖಂಡ ಮುನೀರ್ ಕಾಟಿಪಳ್ಳ, ಕಾಂಗ್ರೆಸ್ ಮುಖಂಡರಾದ ಕೆ.ಹರೀಶ್ ಕುಮಾರ್, ಇನಾಯತ್ ಅಲಿ, ಪದ್ಮರಾಜ್ ಪೂಜಾರಿ, ರಕ್ಷಿತ್ ಶಿವರಾಂ, ಶಾಹುಲ್ ಹಮೀದ್ ಕೆ.ಕೆ, ಎಂ.ಜಿ ಹೆಗಡೆ, ನೆಹರೂ ವಿಚಾರ ವೇದಿಕೆ ಮಂಗಳೂರು ಅಧ್ಯಕ್ಷರಾದ ನವೀನ್ ರೈ ಚೆಲ್ಯಡ್ಕ, ಪ್ರಧಾನ ಕಾರ್ಯದರ್ಶಿ ಉಮರ್ ಕುಂಞಿ ಸಾಲೆತ್ತೂರು , ನಿತ್ಯನಂದ ಶೆಟ್ಟಿ, ಕೊಂಕಣಿ ಅಕಾಡಮಿ ಸದಸ್ಯ ಸಮರ್ಥ್ ಭಟ್ ಮತ್ತು ಮತ್ತಿತರರು ಉಪಸ್ಥಿತರಿದ್ದರು.