February 4, 2026

ಬಂಟ್ವಾಳ: ನಗರದ ಪುದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಫರಂಗಿಪೇಟೆ ರಾಷ್ಟೀಯ ಹೆದ್ದಾರಿಯ ರಸ್ತೆ ಬದಿ ಕಸದ ರಾಶಿ ನಿರ್ಮಾಣವಾಗಿದ್ದು, ಪ್ಲಾಸ್ಟಿಕ್, ಮನೆ ಕಸ, ಹೋಟೆಲ್ ತ್ಯಾಜ್ಯ ಸೇರಿದಂತೆ ವಿವಿಧ ರೀತಿಯ ಕಸವನ್ನು ಕೆಲವರು ಇಲ್ಲಿಗೆ ತಂದು ಹಾಕುತ್ತಿದ್ದಾರೆ.

ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ. ತ್ಯಾಜ್ಯ ರಾಶಿ ದುರ್ವಾಸನೆ ಬೀರುತ್ತಿದ್ದರೂ ಗ್ರಾಪಂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಗಮನ ಹರಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರಸ್ತೆ ಬದಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಗಬ್ಬುನಾತ ಬೀರುತ್ತಿದೆ. ಜನರು ರಸ್ತೆಯಲ್ಲಿ ಮೂಗು ಹಿಡಿದುಕೊಂಡು ಓಡಾಡಬೇಕಾದ ಸ್ಥಿತಿ ಇದೆ ಎಂದು ದೂರಿದ್ದಾರೆ.

ಅಲ್ಲದೆ, ಗ್ರಾ ಪಂ ಶೀಘ್ರ ಎಚ್ಚೆತ್ತುಕೊಂಡು ಮುಂದೆ ಇಂತಹ ತ್ಯಾಜ್ಯ ಬೀಳದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಬಿದ್ದಿರುವ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕು. ಆ ಮೂಲಕ ನಗರದ ಸ್ವಚ್ಛತೆ, ಸೌಂದರ್ಯ ಕಾಪಾಡುವ ಮೂಲಕ ನಗರದಲ್ಲಿ ಆರೋಗ್ಯಕರ ವಾತಾವರಣ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.