March 26, 2026

ನವದೆಹಲಿ: ದೆಹಲಿಯ ನೂತನ ಮುಖ್ಯಮಂತ್ರಿಯ ಪದಗ್ರಹಣಕ್ಕೆ ನಾಳೆ ಮುಹೂರ್ತ ನಿಗದಿಯಾಗಿದ್ದರೂ ಮುಖ್ಯಮಂತ್ರಿಯ ಹೆಸರನ್ನು ಮಾತ್ರ ಬಿಜೆಪಿ ಬಿಟ್ಟುಕೊಟ್ಟಿರಲಿಲ್ಲ. ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ 27 ವರ್ಷಗಳ ಬಳಿಕ ಬಿಜೆಪಿ ಭಾರೀ ಬಹುಮತ ಪಡೆಯುವ ಮೂಲಕ ದಿಗ್ವಿಜಯ ಸಾಧಿಸಿದಾಗಿನಿಂದಲೂ ಈ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿ ಗೆದ್ದ ಪರ್ವೇಶ್ ವರ್ಮಾ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಆಶಿಶ್ ಸೂದ್, ಜಿತೇಂದ್ರ ಮಹಾಜನ್, ರೇಖಾ ಗುಪ್ತಾ ಮುಂತಾದವರ ಹೆಸರು ಸಿಎಂ ರೇಸ್​ನಲ್ಲಿ ಕಾಣಿಸಿಕೊಂಡಿತ್ತು. ದೆಹಲಿ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಇದೀಗ ತೆರೆ ಎಳೆದಿರುವ ಬಿಜೆಪಿ ರೇಖಾ ಗುಪ್ತಾ ಅವರನ್ನು ದೆಹಲಿ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದೆ. ಹಾಗೇ, ಪರ್ವೇಶ್ ವರ್ಮ ಅವರನ್ನು ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ.

ಇದಕ್ಕೂ ಮೊದಲು ಬಿಜೆಪಿಯ ಸುಷ್ಮಾ ಸ್ವರಾಜ್, ಕಾಂಗ್ರೆಸ್​ನ ಶೀಲಾ ದೀಕ್ಷಿತ್, ಆಮ್ ಆದ್ಮಿ ಪಕ್ಷದ ಅತಿಶಿ ದೆಹಲಿಯ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು. 4ನೇ ಮಹಿಳಾ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಆಯ್ಕೆಯಾಗಿದ್ದಾರೆ. ರೇಖಾ ಗುಪ್ತಾ (ಶಾಲಿಮಾರ್ ಬಾಗ್ ಶಾಸಕಿ) ಬಿಜೆಪಿಯ ಮಹಿಳಾ ವಿಭಾಗದ ರಾಷ್ಟ್ರೀಯ ಉಪಾಧ್ಯಕ್ಷೆಯೂ ಆಗಿದ್ದಾರೆ. 29,595 ಮತಗಳ ಅಂತರದಿಂದ ತಮ್ಮ ಸ್ಥಾನವನ್ನು ಗೆದ್ದಿದ್ದಾರೆ.

ದೆಹಲಿಯ ನೂತನ ಮುಖ್ಯಮಂತ್ರಿಯ ಆಯ್ಕೆಗಾಗಿ ಇಂದು ಸಂಜೆ ದೆಹಲಿಯಲ್ಲಿ ಬಿಜೆಪಿ ಶಾಸಕರ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಸಿಎಂ ಹೆಸರನ್ನು ಅಂತಿಮಗೊಳಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಇತರ ಸಂಸದೀಯ ಸದಸ್ಯರು ‘ಪಂಜಾಬಿ’ ಮತ್ತು ‘ಬನಿಯಾ’ ಸಮುದಾಯಗಳಿಂದ ಸಿಎಂ ಸಂಭಾವ್ಯರ ಹೆಸರುಗಳನ್ನು ಚರ್ಚಿಸಿದ್ದರು ಎನ್ನಲಾಗಿದೆ. ಹಾಗೇ, ಈ ಬಾರಿ ದೆಹಲಿಯಲ್ಲಿ ಮಹಿಳಾ ಮುಖ್ಯಮಂತ್ರಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂಬ ಸುದ್ದಿಗಳೂ ಹರಿದಾಡಿದ್ದವು