February 4, 2026

ಮಂಗಳೂರು : ಕ್ಯಾಂಡಿ ತಿನ್ನುವಾಗ ಗಂಟಲಲ್ಲಿ ಸುಲುಕಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದ ಎರಡು ವರ್ಷದ ಮಗುವಿಗೆ ಕಕ್ಕಿಂಜೆ ಶ್ರೀಕೃಷ್ಣ ಆಸ್ಪತ್ರೆಯ ಕೆಎಂಸಿ ವೈದ್ಯರು ಮರು ಜನ್ಮ ನೀಡಿದ್ದಾರೆ.

ಗಂಟಲಲ್ಲಿ ಕ್ಯಾಂಡಿ ಸಿಲುಕಿದರ ಪರಿಣಾಮವಾಗಿ ಮಗು ಉಸಿರಾಟಕ್ಕೆ ತೊಂದರೆಯುಂಟಾಗಿತ್ತು. ತಕ್ಷಣಕ್ಕೆ ಮಗುವಿನ ಪೋಷಕರು ಆಸ್ಪತ್ರೆಗೆ ಕರೆ ತಂದಿದ್ದು, ವೈದ್ಯರ ಸಮಯ ಪ್ರಜ್ಞೆಯಿಂದಾಗಿ ತಕ್ಷಣಕ್ಕೆ ಗಂಟಲಲ್ಲಿ ಸಿಲುಕಿದ್ದ ಕ್ಯಾಂಡಿಯನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.

ಆಸ್ಪತ್ರೆಗೆ ಮಗುವನ್ನು ಕರೆತಂದಾಗ ಮಗು ಬಹಳ ನಿಶ್ಶಕ್ತಗೊಂಡಿದ್ದು, ಆಮ್ಲಜನಕ ಪ್ರಮಾಣವೂ ಅಪಾಯಮಟ್ಟದಲ್ಲಿ ಕಡಿಮೆಯಾಗಿತ್ತು. ಉಸಿರಾಟ ನಡೆಸಲು ಕೂಡ ಕಷ್ಟವಾಗುತ್ತಿತ್ತು. ತಕ್ಷಣ ಆಸ್ಪತ್ರೆಯ ತಜ್ಞ ವೈದ್ಯರು ಪರೀಕ್ಷೆ ನಡೆಸಿ ‘ವಿಶೇಷವಾದ ಚೋಕಿಂಗ್‌ ರೆಸ್ಕ್ಯೂ ವಿಧಾನವನ್ನು’ ಕೈಗೊಂಡರು. ಆದರೂ ಮಗುವಿನ ಸ್ಥಿತಿ ಸುಧಾರಿಸದಿದ್ದಾಗ ಕ್ರಮಬದ್ಧವಾಗಿ ಬೆನ್ನಿಗೆ ಮತ್ತು ಹೊಟ್ಟೆಯ ಭಾಗದಲ್ಲಿ ಒತ್ತಡ ಹಾಕುವ ಮೂಲಕ ಸಿಲುಕಿದ್ದ ಕ್ಯಾಂಡಿಯನ್ನು ವಾಂತಿ ಮಾಡಿಸಿ ಹೊರ ತೆಗೆಯಲಾಗಿದೆ. ಆ ಬಳಿಕ ಮಗುವಿನ ಉಸಿರಾಟದಲ್ಲಿ ಸುಗಮವಾಯಿತು. ಸದ್ಯ ಮಗುವನಗನು ನಿಗಾ ಘಟಕದಲ್ಲಿ ಇರಿಸಿ ಆರೈಕೆ ಮಾಡಲಾಗಿದೆ. ಜತೆಗೆ ಎಕ್ಸ್‌ ರೇ ಮೂಲಕ ಮತ್ತೆ ಯಾವುದೇ ರೀತಿಯ ಸಮಸ್ಯೆ ಇದೆಯೇ ಎಂದು ಕೂಡ ಪರೀಕ್ಷಿಸಲಾಗಿದೆ ಎಂದು ತುರ್ತುಚಿಕಿತ್ಸಾ ಘಟಕ ಕ್ಲಸ್ಟರ್‌ ಮುಖ್ಯಸ್ಥರಾದ ಡಾ. ಜೀಧು ರಾಧಾಕೃಷ್ಣನ್‌ ಹೇಳಿದರು.

ಉಸಿರುಗಟ್ಟುವುದು ಅಥವಾ ಚೋಕಿಂಗ್‌ ಎಂದು ಕರೆಯಲ್ಪಡುವ ಸಮಸ್ಯೆ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ, ದುರಾದೃಷ್ಟವಶಾತ್‌ ನಗರ ಪ್ರದೇಶಗಳಲ್ಲೂ ಇಂತಹ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುತ್ತಿಲ್ಲ. ಕಕ್ಕಿಂಜೆಯಲ್ಲಿ ನಡೆದ ಈ ಪ್ರಕರಣ ನಮ್ಮ ವೈದ್ಯರ ತುರ್ತು ಆರೈಕೆ, ಚಿಕಿತ್ಸೆ ಕೈಗೊಳ್ಳುವಲ್ಲಿನ ತಜ್ಞರ ಬದ್ದತೆ ಹಾಗೂ ಪ್ರಕರಣ ನಿರ್ವಹಿಸಿದ ಕೌಶಲ್ಯವನ್ನು ಎತ್ತಿಹಿಡಿಯುತ್ತದೆ. ಇದರಿಂದ ಇಂದು ಒಂದು ಮಗುವಿನ ಜೀವವನ್ನು ರಕ್ಷಿಸಲಾಗಿದೆ ಎಂದು ಕೆಎಂಸಿ ಆಸ್ಪತ್ರೆ ಮಂಗಳೂರಿನ ಪ್ರಾದೇಶಿಕ ಕಾರ್ಯನಿರ್ವಹಣಾಧಿಕಾರಿ ಸಾಘಿರ್‌ ಸಿದ್ದಿಕಿ ತಿಳಿಸಿದರು.