

ಬಂಟ್ವಾಳ: ಗಂಡ-ಹೆಂಡತಿಯ ಮೃತದೇಹ ಮನೆಯಲ್ಲಿ ಪತ್ತೆಯಾಗಿದ್ದು, ಗಂಡ ನೇಣು ಬಿಗಿದ ಸ್ಥಿತಿಯಲ್ಲಿದ್ದು, ತುಂಬು ಗರ್ಭಿಣಿಯಾಗಿದ್ದ ಹೆಂಡತಿಯ ಮೃತದೇಹ ಮಲಗುವ ಕೋಣೆಯ ಬೆಡ್ಡಿನ ಕೆಳಗೆ ಪತ್ತೆಯಾದ ಘಟನೆ ನಾವೂರು ಗ್ರಾಮದ ಬಡಗುಂಡಿ ಎಂಬಲ್ಲಿ ಗುರುವಾರ ನಡೆದಿದೆ.
ಸಜೀಪಮೂಡ ಗ್ರಾಮದ ಮಿತ್ತಮಜಲು ನಿವಾಸಿ ತಿಮ್ಮಪ್ಪ ಮೂಲ್ಯ ಹಾಗೂ ಅವರ ಪತ್ನಿ ಜಯಂತಿ ಮೃತಪಟ್ಟವರು. ತಿಮ್ಮಪ್ಪ ಮೂಲ್ಯ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಪತ್ನಿಯ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಕುತ್ತಿಗೆ ಭಾಗದಲ್ಲಿ ಗಾಯಗಳಿವೆ ಎನ್ನಲಾಗಿದೆ.
ತಿಮ್ಮಪ್ಪ ಅವರ ಮನೆ ಮಿತ್ತಮಜಲಿನಲ್ಲಿದ್ದು, ಪತ್ನಿಯ ಮನೆ ಬಡಗುಂಡಿಯಲ್ಲಿದೆ. ಇವರಿಗೆ ಕಳೆದ 15 ವರ್ಷಗಳ ಹಿಂದೆ ಮದುವೆಯಾಗಿದ್ದು, ಈವರೆಗೆ ಮಕ್ಕಳಾಗಿರಲಿಲ್ಲ. ಸದ್ಯ ಜಯಂತಿ ಗರ್ಭಿಣಿಯಾಗಿದ್ದು, ಮನೆಯಲ್ಲಿ ಸೀಮಂತದ ದಿನಾಂಕವೂ ನಿಗದಿಯಾಗಿತ್ತು ಎನ್ನಲಾಗಿದೆ.
ಘಟನೆಗೆ ಸ್ಪಷ್ಟವಾದ ಕಾರಣ ಇನ್ನೂ ಕೂಡ ತಿಳಿದು ಬಂದಿಲ್ಲ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ಭೇಟಿ ನೀಡಿ ಪ್ರಕರಣ ದಾಖಲಿಸಿ ಕೊಂಡು ತನಿಖೆ ಮುಂದುವರಿಸಿದ್ದಾರೆ.