ಮಂಗಳೂರು: ನಗರದ ವಿವಿಧ ಪ್ರದೇಶಗಳಿಗೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್ ಲೈನ್ ಪಡೀಲ್- ಕಣ್ಣೂರು ಬಳಿ ಕಾಮಗಾರಿ ವೇಳೆ ಹಾನಿಗೊಳಗಾದ ಪರಿಣಾಮ ಸೋಮವಾರ ಮತ್ತು ಮಂಗಳವಾರ ನೀರು ಪೂರೈಕೆ ಸ್ಥಗಿತವಾಗಿತ್ತು. ಇದರಿಂದ ನಗರದಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, ಜನರು ಪರದಾಡುವಂತಾಗಿದೆ.

ಕಳೆದ ಬಾರಿ ಎನ್ ಆರ್ ಸಿ ವಿರುದ್ಧ ನಡೆದ ಪ್ರತಿಭಟನೆಗೆ ಬಳಕೆಯಾಗಿದ್ದ ಮೈದಾನದಲ್ಲಿ ಖಾಸಗಿಯವರು ಕಟ್ಟಡ ನಿರ್ಮಾಣದಲ್ಲಿ ತೊಡಗಿದ್ದಾರೆ. ಇದಕ್ಕಾಗಿ ಭಾರೀ ಪ್ರಮಾಣದಲ್ಲಿ ಹೆದ್ದಾರಿಗೆ ಸಂಪರ್ಕಕ್ಕಾಗಿ ಮಣ್ಣು ಹಾಕಲಾಗಿದೆ. ತುಂಬೆಯಿಂದ ನೀರು ಪೂರೈಸುವ ಕೊಳವೆಯ ಮೇಲಿನಿಂದಲೇ ಮಣ್ಣು ತುಂಬಿದ್ದು ಜೆಸಿಬಿ, ಟಿಪ್ಪರ್ ಇನ್ನಿತರ ವಾಹನಗಳ ಸಾಗಾಟದಿಂದಾಗಿ ಪೈಪ್ ಒಡೆದು ಹೋಗಿದೆ.
ಭಾನುವಾರ ರಾತ್ರಿಯಿಂದ ನೀರು ಹೊರ ಚೆಲ್ಲುತ್ತಿದ್ದು ಎರಡು ದಿನಗಳಿಂದ ನೀರು ನಿಲ್ಲಿಸಲಾಗದೆ ಪಾಲಿಕೆಯ ಅಧಿಕಾರಿಗಳು ಪರದಾಡಿದ್ದಾರೆ. ಸ್ಥಳದಲ್ಲಿ ನೀರು ಭಾರೀ ಪ್ರಮಾಣದಲ್ಲಿ ಶೇಖರಣೆಯಾಗಿದ್ದು ಅದನ್ನು ಹೊರಗೆ ಹಾಕುವುದಕ್ಕಾಗಿ ಪಂಪ್ ಇಡಲಾಗಿದೆ. ಇದರಿಂದಾಗಿ ಮಂಗಳೂರು ನಗರಕ್ಕೆ ನೀರು ವ್ಯತ್ಯಯವಾಗಿದೆ.
ಬುಧವಾರ ಬೆಳಗ್ಗೆ ದುರಸ್ತಿ ಕಾರ್ಯ ಮುಗಿಯಲಿದೆ ಎನ್ನಲಾಗಿದೆ. ಆದರೆ ದುರಸ್ತಿ ಬಳಿಕ ನಗರದ ವಿವಿಧ ಕಡೆಗಳಿಗೆ ನೀರು ತಲುಪಲು ಕನಿಷ್ಟ 12 ಗಂಟೆ ಬೇಕಾಗಬಹುದು. ಹಾಗಾಗಿ ಬುಧವಾರವೂ ಎಲ್ಲಾ ಕಡೆಗಳಿಗೆ ನೀರು ಸರಬರಾಜು ಆಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.
ನೀರು ವ್ಯತ್ಯಯದಿಂದಾಗಿ ಪಡೀಲ್, ಮರೋಳಿ, ಕಂಕನಾಡಿ, ಮಂಗಳಾದೇವಿ, ಜೆಪ್ಪು ಪನ್ನೀರ್, ಮುಳಿಹಿತ್ಲು, ಬೋಳಾರ, ಕಾರ್ ಸ್ಟ್ರೀಟ್, ಮಣ್ಣಗುಡ್ಡ, ಪಾಂಡೇಶ್ವರ, ಸ್ಟೇಟ್ ಬ್ಯಾಂಕ್, ಶಕ್ತಿನಗರ, ಕಣ್ಣೂರು, ಬಜಾಲ್, ಜಪ್ಪಿನಮೊಗರು, ಅಳಪೆ, ಅತ್ತಾವರ, ಉಲ್ಲಾಸ್ ನಗರ, ಚಿಲಿಂಬಿ, ಕೋಡಿಕಲ್, ಉರ್ವಾ ಸ್ಟೋರ್, ಅಶೋಕನಗರ, ಕುಡುಪು, ವಾಮಂಜೂರು, ಬೋಂದೆಲ್, ಕಾವೂರು, ಮರಕದ ಮುಂತಾದ ಭಾಗದಲ್ಲಿ ನೀರು ಸರಬರಾಜಿನಲ್ಲಿ ತೊಂದರೆಯಾಗಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ನೀರು ಪೂರೈಸುವ ಪೈಪ್ ಮೇಲೆ ಮಣ್ಣು ಹಾಕುವುದಕ್ಕೆ ಅವಕಾಶ ಇಲ್ಲ. ಆದರೆ ತುಂಬೆಯಿಂದ ಹೆದ್ದಾರಿ ಉದ್ದಕ್ಕೂ ಇರುವ ನೀರಿನ ಪೈಪ್ ಮೇಲೆ ಅಲ್ಲಲ್ಲಿ ಅಕ್ರಮವಾಗಿ ಮಣ್ಣು ಹಾಕಲಾಗಿದೆ. ಈ ಜಾಗದಲ್ಲಿ ಇತ್ತೀಚೆಗೆ ಮಣ್ಣು ತುಂಬಿ ಅದರ ಬೆನ್ನಲ್ಲೇ ಟಿಪ್ಪರ್, ಜೆಸಿಬಿ ಚಲಿಸಿದ್ದರಿಂದ ಒತ್ತಡ ಬಿದ್ದು ಪೈಪ್ ಒಡೆದಿದೆ ಎನ್ನಲಾಗುತ್ತಿದೆ.
