February 4, 2026
census

ಬೆಂಗಳೂರು: ಜಾತಿ ಜನಗಣತಿಗೆ ಸಂಬಂಧ ಗೊಂದಲ ನಿವಾರಣೆಯಾಗಿದ್ದು, ನಿಗದಿಯಂತೆ ಸೆಪ್ಟೆಂಬರ್​ 22ರಿಂದ ಅಕ್ಟೋಬರ್​​ 7ರವರೆಗೆ ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಕೈಗೊಳ್ಳಲು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಈ ಆದೇಶದ ಮೂಲಕ ಸಮೀಕ್ಷೆ ನಡೆಯುವ ಗೊಂದಲಕ್ಕೆ ತೆರೆ ಬಿದ್ದಿದೆ. ಸಮೀಕ್ಷೆಯ ಜಾತಿಪಟ್ಟಿಯಲ್ಲಿ ಹೆಚ್ಚುವರಿ ಜಾತಿ ಸೇರ್ಪಡೆಗೊಳಿಸಿರುವ ಕಾರಣ ಕೆಲ ಸಚಿವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಜಾತಿ ಗೊಂದಲ ನಿವಾರಿಸುವಂತೆ ಆಗ್ರಹಿಸಿದ್ದರು. ಅಲ್ಲದೆ, ಸಮೀಕ್ಷೆಯನ್ನು ಮುಂದೂಡುವಂತೆ ಹಲವು ಸಚಿವರು ಒತ್ತಡ ಹೇರಿದ್ದರು. ಹೀಗಾಗಿ, ಜಾತಿ ಗಣತಿ ಮುಂದೂಡಿಕೆಯಾಗುವ ಮಾತುಗಳು ಕೇಳಿ ಬಂದಿತ್ತು. ಆದರೆ, ರಾಜ್ಯ ಸರ್ಕಾರ ಈ ಎಲ್ಲಾ ಗೊಂದಲಕ್ಕೆ ತೆರೆ ಎಳೆದಿದೆ.

ಶುಕ್ರವಾರ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಾತಿ ಗೊಂದಲ ನಿವಾರಿಸಲು ಸೂಚಿಸಲಾಗಿತ್ತು. ವೀರಶೈವ ಲಿಂಗಾಯತ ಸಮುದಾಯದವರು ಜಾತಿ ಪಟ್ಟಿ ನೀಡಿದ್ದು, ಅದರ ಅನ್ವಯ ಜಾತಿ ಪಟ್ಟಿಯನ್ನು ಪರಿಷ್ಕರಿಸಲು ಸೂಚಿಸಲಾಗಿದೆ.

ಅದೇ ರೀತಿ ಕ್ರಿಶ್ಚಿಯನ್ ಜೊತೆ ಹಿಂದೂ ಜಾತಿ ಕಾಲಂನ್ನೂ ಕೈಬಿಡುವ ಬಗ್ಗೆ ಸೂಚನೆ ನೀಡಲಾಗಿತ್ತು. ಒಂದು ವೇಳೆ ಗೊಂದಲ ಇದ್ದರೆ ಸಾರ್ವಜನಿಕರು ಇತರೆ ಕಾಲಂನಲ್ಲಿ ಜಾತಿ ಉಲ್ಲೇಖ ಮಾಡಲಿ. ಬಳಿಕ ಟ್ಯಾಬುಲೇಷನ್ ವೇಳೆ ಅವುಗಳನ್ನು ಪರಿಶೀಲಿಸಿ, ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಜಾತಿ ಪಟ್ಟಿಯನ್ನು ಪರಿಷ್ಕರಿಸಿ, ಸಮೀಕ್ಷೆ ಆ್ಯಪ್​ನಲ್ಲಿ ಸೂಕ್ತ ಬದಲಾವಣೆ ಮಾಡಲು ಸೂಚನೆ ನೀಡಲಾಗಿದೆ.

60 ಪ್ರಶ್ನೆಗಳ ಮೂಲಕ ಮಾಹಿತಿ ಕಲೆ: ಸಮೀಕ್ಷೆ ವೇಳೆ ಗಣತಿದಾರರು 60 ಪ್ರಶ್ನೆಗಳನ್ನು ಕೇಳಲಿದ್ದಾರೆ. ಆಶಾ ಕಾರ್ಯಕರ್ತೆಯರು ಮುಂಚಿತವಾಗಿಯೇ ಈ 60 ಪ್ರಶ್ನೆಗಳ ನಮೂನೆಯನ್ನು ಪ್ರತಿ ಮನೆಗಳಿಗೆ ತೆರಳಿ ನೀಡಲಿದ್ದಾರೆ. ಆ ಮೂಲಕ ಸಾರ್ವಜನಿಕರು ಪ್ರಶ್ನೆಗಳನ್ನು ಓದಿ ಪೂರ್ವ ಸಿದ್ಧತೆ ಮಾಡಿಕೊಳ್ಳಬಹುದು.‌ ಬಳಿಕ ಗಣತಿದಾರರು ಮನೆಗೆ ಬಂದು 60 ಪ್ರಶ್ನೆಗಳಿಗೆ ಉತ್ತರ ಪಡೆಯಲಿದ್ದಾರೆ.

ಸಾರ್ವಜನಿಕರು ನೀಡುವ ಮಾಹಿತಿಯನ್ನು ಗಣತಿದಾರರು ಮೊಬೈಲ್ ಅಪ್ಲಿಕೇಶನ್​ನಲ್ಲಿ ತುಂಬಲಿದ್ದಾರೆ. ಪ್ರಶ್ನಾವಳಿಯಲ್ಲಿ ಪ್ರತಿ ಸದಸ್ಯರ ಧರ್ಮ, ಜಾತಿ, ಉಪಜಾತಿ, ವಿದ್ಯಾರ್ಹತೆ, ಕುಲಕಸುಬು, ಕೌಶಲ್ಯ ತರಬೇತಿ ಅಗತ್ಯತೆ, ಆದಾಯ, ಕುಟುಂಬದ ಸ್ಥಿರ ಹಾಗೂ ಚರಾಸ್ಥಿ ವಿವರಗಳನ್ನು ಕೇಳಲಾಗುತ್ತದೆ.

ಕುಟುಂಬದ ಎಲ್ಲಾ ಸದಸ್ಯರುಗಳ ಆಧಾರ್ ಕಾರ್ಡ್​​​ಗಳು, ಯಾವ ಮೊಬೈಲ್ ನಂಬರ್​​ಗಳಿಗೆ ಲಿಂಕ್ ಆಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಆಧಾರ್ ಕಾರ್ಡ್ ನಂಬರ್​​ಗೆ ಪ್ರಸ್ತುತ ಬಳಸುತ್ತಿರುವ ಮೊಬೈಲ್ ನಂಬರ್ ಲಿಂಕ್ ಆಗಿರದಿದ್ದರೆ, ಲಿಂಕ್ ಮಾಡಿಕೊಳ್ಳಬೇಕು. ಆಧಾರ್ ಕಾರ್ಡ್ ಇದ್ದು, ಲಿಂಕ್ ಆಗಿರುವ ಮೊಬೈಲ್ ನಂಬರ್ ಇಲ್ಲದಿದ್ದರೆ, ಹತ್ತಿರದ ಆಧಾರ್ ಎನ್​ರೋಲ್​​​ಮೆಂಟ್ ಸೆಂಟರ್/ಗ್ರಾಮ ಒನ್ ಸೆಂಟರ್​​ಗೆ ಭೇಟಿ ನೀಡಿ, ಈಗ ಬಳಸುತ್ತಿರುವ ಮೊಬೈಲ್ ನಂಬ‌ರ್​​ಗೆ ಲಿಂಕ್ ಮಾಡಿಸಿಕೊಳ್ಳಬೇಕಾಗುತ್ತದೆ.

ಗ್ರಾಮ ಮಟ್ಟದಲ್ಲಿ ಆಧಾರ್ ಜೋಡಣೆಯ ಬಗ್ಗೆ ಸಂಪರ್ಕಿಸಬೇಕಾದ ಅಂಚೆ ಇಲಾಖೆಯ ಸಿಬ್ಬಂದಿಯ ವಿವರಗಳನ್ನು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವೆಬ್​​ಸೈಟ್‌ನಲ್ಲಿ (https://kscbc.karnataka.gov.in) ಪ್ರಕಟಿಸಲಾಗಿದೆ. ಆಧಾರ್ ಸಂಖ್ಯೆಯನ್ನು ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಿಕೊಂಡು ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು.