ಬಂಟ್ವಾಳ: ಕೊಳತ್ತಮಜಲಿನ ಅಬ್ದುಲ್ ರಹಿಮಾನ್ ಹತ್ಯೆಯ ಆರೋಪಿಗಳ ವಿರುದ್ಧ ಕಠಿನ ಕ್ರಮಕ್ಕೆ ಆಗ್ರಹಿಸಿ ಡಿ. 19ರಂದು ಎಸ್‌ಡಿಪಿಐ ಮಂಗಳೂರಿನಲ್ಲಿ ನಡೆಸಿದ ಪ್ರತಿಭಟನೆಯ ಸಂದರ್ಭದ ಭಾಷಣದ ಕೆಲವು ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದ್ದು, ಅದರಲ್ಲಿ ಹಲವು ಸುಳ್ಳು ಮಾಹಿತಿಗಳ ಜತೆಗೆ ನ್ಯಾಯಾಲಯಗಳ ಕೆಲವು ತೀರ್ಪುಗಳ ಆಯ್ದ ಭಾಗವನ್ನು ಮಾತ್ರ ತಿಳಿಸಿ ಜನರಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸಲಾಗಿದೆ ಎಂದು ಆರೋಪಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಪೊಲೀಸ್ ಇಲಾಖೆಯು ಸೂಕ್ತ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಜತೆಗೆ ಈ ವಿಚಾರದಲ್ಲಿ ಪೊಲೀಸ್ ಇಲಾಖೆಯು ಎಸ್‌ಡಿಪಿಐ ನಾಯಕರ ಮುಂದೆ ಒಂದಷ್ಟು ಪ್ರಶ್ನೆಗಳನ್ನೂ ಇಟ್ಟಿದೆ. ವಿವಿಧ ನ್ಯಾಯಾಲಯಗಳ ಕೆಲವು ತೀರ್ಪುಗಳ ಆಯ್ದ ಭಾಗವನ್ನು ಮಾತ್ರ ಓದಿದರೆ ದೇಶದ್ರೋಹಿ ಮತ್ತು ಭಯೋತ್ಪಾದಕ ಕೃತ್ಯಗಳಲ್ಲಿ ಎಸ್‌ಡಿಪಿಐ ಪಾತ್ರವಹಿಸಿರುವಂತೆ ಬಿಂಬಿಸಬಹುದಾಗಿದ್ದು, ಹಾಗೆ ಮಾಡುವುದು ಸರಿಯಾಗುತ್ತದೆಯೇ ಎಂದು ಕೆಲವು ಉದಾಹರಣೆಗಳನ್ನು ಮುಂದಿಟ್ಟಿದೆ.
ಭಯೋತ್ಪಾದಕ ಸಂಘಟನೆ ಜತೆ ಕೈಜೋಡಿಸಿದೆ ಎನ್ನಬಹುದೇ?
2023ರ ಮೇ ತಿಂಗಳಲ್ಲಿ ಯುಎಪಿಎ ಕಾಯ್ದೆಯಡಿ ಎಸ್‌ಡಿಪಿಐಯ ಮಂಗಳೂರು ಕಚೇರಿಯನ್ನು ಜಪ್ತಿ ಮಾಡಿರುವುದನ್ನು ಪ್ರಶ್ನಿಸಿ ಎಸ್‌ಡಿಪಿಐ ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯ ಹೈಕೋರ್ಟ್ ತಿರಸ್ಕರಿಸಿರುತ್ತದೆ. ಹಾಗಾದರೆ ಎಸ್‌ಡಿಪಿಐ ಪಕ್ಷವು ಭಯೋತ್ಪಾದಕ ಸಂಘಟನೆಯೊಂದಿಗೆ ಕೈಜೋಡಿಸಿದೆ ಎಂದು ಹೇಳುವುದು ಸರಿಯಾಗುತ್ತದೆಯೇ ?, ಜಿಲ್ಲೆಯಲ್ಲಿ ಈ ಹಿಂದೆ ಕೋಮುದ್ವೇಷದ ಹಿನ್ನೆಲೆಯಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಎಸ್‌ಡಿಪಿಐ ಬೆಂಬಲಿತ ಗ್ರಾ.ಪಂ. ಸದಸ್ಯನೊಬ್ಬ ಕೊಲೆಯ ಆರೋಪಿಯಾಗಿದ್ದು, ಇನ್ನೂ ಜೈಲಿನಲ್ಲಿದ್ದಾನೆ. ವಿವಿಧ ನ್ಯಾಯಾಲಯಗಳು ಆತನ ಜಾಮೀನು ಅರ್ಜಿಯನ್ನು ತಿರಸ್ಕರಿಸಿವೆ. ನ್ಯಾಯಾಲಯಗಳ ತೀರ್ಪುಗಳ ಆಯ್ದ ಭಾಗವನ್ನು ಮಾತ್ರ ಓದಿ ಎಸ್‌ಡಿಪಿಐ ಸಂಚು ಮಾಡುವ ಹಾಗೂ ಕೊಲೆಗಾರರ ಸಂಘಟನೆ ಎಂದು ಹೇಳುವುದು ಸರಿಯಾಗುತ್ತದೆಯೇ?, ಎಸ್‌ಡಿಪಿಐಯಲ್ಲಿ ತೊಡಗಿಸಿಕೊಂಡಿರುವ ಎಲ್ಲ ಸದಸ್ಯರು ರಾಜೀನಾಮೆ ನೀಡಬೇಕು ಎಂದು ಹೇಳುವುದು ಸರಿಯಾಗುತ್ತದೆಯೇ? ಎಂದು ಪೊಲೀಸರು ಎಸ್‌ಡಿಪಿಐ ಪಕ್ಷದ ಮುಂದೆ ಪ್ರಶ್ನೆಗಳನ್ನಿಟ್ಟಿದ್ದಾರೆ.
ಸಾರ್ವಜನಿಕರೂ ಜಾಗೃತರಾಗಿರಿ
ನ್ಯಾಯಾಲಯಗಳ ತೀರ್ಪುಗಳ ಆಯ್ದ ಭಾಗವನ್ನು ಮಾತ್ರ ತಿಳಿಸುವುದು ಕೆಲವರ ಸುಳ್ಳು ಸುದ್ದಿ ಪ್ರಸಾರದ ಒಂದು ಭಾಗವಾಗಿದ್ದು, ಅಂತಹ ಸುಳ್ಳು ಮಾಹಿತಿಯ ಪ್ರಶ್ನೆಗಳನ್ನು ಪ್ರತಿಭಟನಕಾರರು ಮೊದಲಾಗಿ ತಮ್ಮಲ್ಲೇ ತಾವು ಕೇಳಿಕೊಂಡಲ್ಲಿ ಇಂತಹ ಕೃತ್ಯಗಳು ಕೊನೆಯಾಗಬಹುದಾಗಿದೆ. ಸಾರ್ವಜನಿಕರು ಕೂಡ ಅಂತಹ ಸಂಚುಗಳ ಕುರಿತು ಜಾಗರೂಕರಾಗಿರಬೇಕಾಗಿ ಪೊಲೀಸ್ ಇಲಾಖೆ ವಿನಂತಿಸಿದೆ.
