ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರು ಪಾಲ್ಗೊಂಡು ತ್ರಿವೇಣಿ ಸಂಗಮದಲ್ಲಿ ರವಿವಾರ ಮುಂಜಾನೆ ತೀರ್ಥಸ್ನಾನ ಮಾಡಿದ್ದಾರೆ.

‘‘ಪ್ರಯಾಗ್‌ರಾಜ್‌ನ ಈ ಮಹಾ ಕುಂಭದಲ್ಲಿ ಪಾಲ್ಗೊಳ್ಳಲು ನನಗೆ ಸೌಭಾಗ್ಯ ಸಿಕ್ಕಿದ್ದು ನಿಜಕ್ಕೂ ಖುಷಿ ತಂದಿದೆ. ತ್ರಿವೇಣಿ ಸಂಗಮದಲ್ಲಿ ಮಿಂದದ್ದು ಮರೆಯಲಾಗದ ಅದ್ಭುತ ಆಧ್ಯಾತ್ಮಿಕ ಅನುಭವ. ಈ ಪುಣ್ಯಸ್ನಾನದಿಂದ ನವ ಚೈತನ್ಯ ಮೂಡಿಸಿದೆ. ಉತ್ತರ ಪ್ರದೇಶದಲ್ಲಿ ವಿಶ್ವದ ಅತಿದೊಡ್ಡ ಧಾರ್ಮಿಕ-ಆಧ್ಯಾತ್ಮಿಕ-ಸಾಂಸ್ಕೃತಿಕ ಸಂಗಮ ಮಹಾ ಕುಂಭಮೇಳವನ್ನು ಅಚ್ಚು ಕಟ್ಟಾಗಿ ನಡೆಯುತ್ತಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಇಲ್ಲಿಗೆ ಬರುತ್ತಿರುವ ಕೋಟ್ಯಂತರ ಭಕ್ತಾದಿಗಳಿಗೆ ಅದ್ಭುತ ವ್ಯವಸ್ಥೆ ಕಲ್ಪಿಸಿದ್ದಾರೆ’’ ಎಂದು ಚೌಟ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
