April 17, 2025

ಮೈಸೂರು : ಭಾರತ ಕ್ರಿಕೆಟ್​ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅಭಿಮಾನಿಗಳು ಪಾಕಿಸ್ತಾನದ ಗಡಿಯಾಚೆಯೂ ಇದ್ದಾರೆ. ವಿರಾಟ್ ಕೊಹ್ಲಿಗೆ ಭಾರತೀಯ ಅಭಿಮಾನಿಗಳಿಂದ ಸಿಗುವ ಪ್ರೀತಿಗಿಂತ ಪಾಕಿಸ್ತಾನದಲ್ಲಿ ಹೆಚ್ಚಿನ ಅಭಿಮಾನಿಗಳಿದ್ದಾರೆ. ಭಾನುವಾರ ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಅದ್ಭುತ ಶತಕದ ನೆರವಿನಿಂದ ಭಾರತ ತಂಡ ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಇದರೊಂದಿಗೆ 2025ರ ಚಾಂಪಿಯನ್ಸ್ ಟ್ರೋಫಿಯಿಂದ ಪಾಕಿಸ್ತಾಮನ ಹೊರಬಿದ್ದಿತು. ಆದರೆ, ಪಾಕಿಸ್ತಾನಿ ಅಭಿಮಾನಿಗಳು ವಿರಾಟ್ ಕೊಹ್ಲಿ ಶತಕವನ್ನು ಆಚರಿಸಿದ್ದಾರೆ. ಇದರ ಮಧ್ಯ ವಿರಾಟ್​ ಕೊಹ್ಲಿ ಆರ್​ಎಸ್​ಎಸ್​ ಕಾರ್ಯಕರ್ತ ಎನ್ನುವ ಪೋಸ್ಟ್​ ಸಹ ಹರಿದಾಡುತ್ತಿದೆ. ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಹೆಸರಿನಲ್ಲಿ ಪೋಸ್ಟ್ ಮಾಡಲಾಗಿದ್ದು, ಇದೀಗ ಇದಕ್ಕೆ ಸ್ವತಃ ಲಕ್ಷ್ಮಣ್ ಅವರೇ ಸ್ಪಷ್ಟೀಕರಣ ನೀಡಿದ್ದಾರೆ.

ತಮ್ಮ ಹೆಸರಿನಲ್ಲಿ ವಿರಾಟ್ ಕೊಹ್ಲಿ ಬಗ್ಗೆ ಆಕ್ಷೇಪಾರ್ಹ ರೀತಿಯ ಹೇಳಿಕೆಯ ಪೋಸ್ಟ್ ಬಗ್ಗೆ ಸ್ಪಷ್ಟನೆ ನೀಡಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ, ಬಿಜೆಪಿಯವರಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲ. ಈ ರಾಜ್ಯದ ಜನತೆಗೆ ಬರೀ ಸುಳ್ಳನ್ನ ಹೇಳುತ್ತಾ ಬಂದಿದ್ದಾರೆ. ಅದಕ್ಕೆ ಇದೊಂದು ಸಣ್ಣ ಉದಾಹರಣೆ. ನನ್ನ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಕೊಹ್ಲಿಯ ಹೆಸರನ್ನು ಬಳಸಿಕೊಂಡು ಹಿಂದುಗಳ ಭಾವನೆಯನ್ನು ಕೆಣಿಸುವಂತಹ ಪೋಸ್ಟ್‌ಗಳನ್ನು ಹಾಕಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ/ ಸದ್ಯದಲ್ಲೇ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟನೆ ನೀಡುವ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಪೋಸ್ಟ್​ನಲ್ಲಿ ಏನಿದೆ?
ಇನ್ನು ನಿನ್ನೆ (ಫೆಬ್ರವರಿ 23) ಟೀಂ ಇಂಡಿಯಾ ಪಾಕಿಸ್ತಾನ ವಿರುದ್ಧ ಗೆದ್ದು ಬೀಗಿದೆ. ಅದರಲ್ಲೂ ವಿರಾಟ್​ ಕೊಹ್ಲಿ ಶತಕ ಬಾರಿಸಿದ್ದಕ್ಕೆ ಮೆಚ್ಚುಗೆ ಪೋಸ್ಟ್​ಗಳು ಹರಿದಾಡುತ್ತಿವೆ. ಇದರ ಮಧ್ಯ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಹೆಸರಿನಲ್ಲಿ ವಿರಾಟ್ ಕೊಹ್ಲಿ ಬಗ್ಗೆ ಆಕ್ಷೇಪಾರ್ಹ ರೀತಿ ಹೇಳಿಕೆ ಪೋಸ್ಟ್ ವೈರಲ್ ಆಗಿತ್ತು. ಪಾಕ್ ನೆಲದಲ್ಲಿ ಪಾಕಿಗಳ ಎದುರೇ ಶತಕ ಸಿಡಿಸಿ ಪಾಕಿಗಳಿಗೆ ಅವಮಾನ ಮಾಡಿ ಭಾರತ ಗೆದ್ದು ಬಂದಿದ್ದು ನೋಡಿದರೆ ವಿರಾಟ್ ಕೊಹ್ಲಿ ಒಬ್ಬ RSS ಕಾರ್ಯಕರ್ತನೇ ಇರಬೇಕು ಎಂದು ಎಂ ಲಕ್ಷ್ಮಣ್ ಹೆಸರಿನಲ್ಲಿ ಪೋಸ್ಟ್ ಮಾಡಲಾಗಿತ್ತು. ಇದೀಗ ಇದಕ್ಕೆ ಸ್ವತಃ ಎಂ ಲಕ್ಷ್ಮಣ್ ಸ್ಪಷ್ಟನೆ ನೀಡಿದ್ದು, ಸುಳ್ಳು ಪೋಸ್ಟ್​ ಹಾಕಿದವರ ವಿರುದ್ಧ ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ.