June 21, 2026

ಹಾಡಹಗಲೇ‌ ಜೈಲಿಗೆ ಗಾಂಜಾ ಎಸೆತ;ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಕೃತ್ಯ!

ಮಂಗಳೂರು: ಮಂಗಳೂರು ಜೈಲಿನಲ್ಲಿ ಹಾಡುಹಗಲೇ ಡ್ರಗ್ಸ್ ಪೂರೈಕೆಯಾಗುತ್ತಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಮಾಜಿ ಮೇಯರ್ ಕವಿತಾ ಸನಿಲ್ ಅವರ ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿಗಳು ಈ ಅಕ್ರಮವನ್ನು ಬಯಲು ಮಾಡಿವೆ.

ಕವಿತಾ ಸನಿಲ್ ಅವರು ಕಾರ್ಯಕ್ರಮವೊಂದನ್ನು ಮುಗಿಸಿ ತಮ್ಮ ಕಾರಿನಲ್ಲಿ ಹಿಂತಿರುಗುವಾಗ ಜೈಲಿನ ಹೊರಗಡೆ ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಚಲಿಸುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ತಮ್ಮ ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾವನ್ನು ಪರಿಶೀಲಿಸಿದಾಗ ಜೈಲಿನ ಗೋಡೆಯ ಬಳಿ ಪ್ಲಾಸ್ಟಿಕ್ ಕವರ್‌ನಲ್ಲಿ ಏನನ್ನೋ ಎಸೆಯುತ್ತಿರುವ ದೃಶ್ಯ ಸೆರೆಯಾಗಿದೆ.

ಈ ಘಟನೆಯ ಬಗ್ಗೆ ಕವಿತಾ ಸನಿಲ್ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ದೃಶ್ಯಾವಳಿಗಳು ಇದೀಗ ಪೊಲೀಸರ ತನಿಖೆಗೆ ಸಹಕಾರಿಯಾಗಿವೆ. ಜೈಲಿನ ಸಿಬ್ಬಂದಿಯ ಸಹಕಾರವಿಲ್ಲದೆ ಇಂತಹ ಕೃತ್ಯಗಳು ನಡೆಯಲು ಸಾಧ್ಯವಿಲ್ಲ ಎಂದು ಶಂಕಿಸಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.