ಮಂಗಳೂರು: ನಗರದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕಂಕನಾಡಿ ಮ್ಯಾಕ್ ಮಾಲ್‌ನ ಪಾರ್ಕಿಂಗ್‌ನಲ್ಲಿ ಕಾನೂನುಬಾಹಿರವಾಗಿ ನಡೆಯುತ್ತಿದ್ದ ಹುಕ್ಕಾ ಬಾರ್‌ಗೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಮೂವರನ್ನು ಬಂಧಿಸಿದ್ದಾರೆ.

ಮ್ಯಾಕ್ ಮಾಲ್‌ನ ಪಾರ್ಕಿಂಗ್‌ನಲ್ಲಿರುವ “ಬ್ಲಾಕ್ ಮೂನ್ ರೆಸ್ಟೋ ಕೆಫೆ” ಹೆಸರಿನಲ್ಲಿ ಅಕ್ರಮವಾಗಿ ಹುಕ್ಕಾ ಬಾರ್ ನಡೆಸಲಾಗುತ್ತಿತ್ತು. ಈ ಸಂಬಂಧ ಸಿದ್ದಿಕ್ ಅಲಿಯಾಸ್ ಎಂ.ಎಫ್.ಸಿ. ಸಿದ್ದಿಕ್, ಅಬ್ದುಲ್ ನಾಸೀರ್ ಮತ್ತು ಸಫ್ವಾನ್ ಎಂಬವರನ್ನು ಬಂಧಿಸಲಾಗಿದೆ.
ಬಂಧಿತರು 2023-24ನೇ ಸಾಲಿನಲ್ಲಿ ಕೆಫೆಟೇರಿಯಾ ನಡೆಸಲು ಮಂಗಳೂರು ಮಹಾನಗರ ಪಾಲಿಕೆಯಿಂದ ಉದ್ದಿಮೆ ಪರವಾನಗಿ ಪಡೆದಿದ್ದರು. ಆದರೆ, ಕೆಫೆಟೇರಿಯಾ ನಡೆಸುವ ನೆಪದಲ್ಲಿ ಅಕ್ರಮವಾಗಿ ಹುಕ್ಕಾ ಬಾರ್ ನಡೆಸುತ್ತಿದ್ದರು. ನಿಯಮಗಳನ್ನು ಉಲ್ಲಂಘಿಸಿ ಯುವಕರನ್ನು ಮಾದಕ ಭ್ರಮಾಲೋಕದಲ್ಲಿ ತೇಲಿಸಿ ಹೆಚ್ಚಿನ ಹಣ ಸಂಪಾದಿಸಿ ಅಪರಾಧ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿ ವೇಳೆ ಹುಕ್ಕಾ ಸೇದುವ ಉಪಕರಣಗಳು ಮತ್ತು ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ.
