ಬೆಳ್ತಂಗಡಿ: ತಾಲೂಕಿನ ಓಡಿಲ್ನಾಳ ಸಂಬೋಳ್ಯದ ಬಾಲಕ ಸುಮಂತ್ ಸಾವಿನ ಪ್ರಕರಣವನ್ನು ಬೇಧಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ನಿರಂತರ ಪ್ರಯತ್ನದಲ್ಲಿದ್ದು, ಆದರೆ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. ಈ ಕುರಿತು ಸಮಗ್ರ ತನಿಖೆಯ ದೃಷ್ಟಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ಚರ್ಚಿಸುವುದಾಗಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಅವರು ರವಿವಾರ ಬೆಳ್ತಂಗಡಿಯ ಕುಕ್ಕೇಡಿಯಲ್ಲಿ ಪತ್ರಕರ್ತರ ಜತೆ ಮಾತನಾಡಿದರು. ಹಲವು ಆಯಾಯಗಳಲ್ಲಿ ತನಿಖೆ ನಡೆಸಿದರೂ ಸೂಕ್ತ ಸುಳಿವು ಲಭ್ಯವಾಗದೇ ಇರುವುದರಿಂದ ಕೊಂಚ ವಿಳಂಬವಾಗಿದೆ. ತಾಲೂಕಿನಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿರುವ ಕುರಿತ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಚಿರತೆಗಳ ಹಾವಳಿ ವಿಪರೀತವಾಗಿರುವುದು ನನ್ನ ಗಮನಕ್ಕೂ ಬಂದಿದ್ದು, ಈ ಕುರಿತು ಅಧಿಕಾರಿಗಳ ಜತೆ ಮಾತನಾಡಿ ಸೂಕ್ತ ಕ್ರಮಕೈಗೊಳ್ಳಲು ಸೂಚಿಸಲಾಗುವುದು.
ಬೆಳ್ತಂಗಡಿ ತಾಲೂಕು ಮಟ್ಟದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸರಕಾರದಿಂದ ಈಗಾಗಲೇ ೩ ಕೋ.ರೂ. ಅನುದಾನ ಬಿಡುಗಡೆಗೊಂಡಿದ್ದು, ಆದರೆ ಬೆಳ್ತಂಗಡಿ ಶಾಸಕರು ಬೇರೆ ಅಭಿಪ್ರಾಯ ಇಟ್ಟುಕೊಂಡ ಕಾರಣದಿಂದ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಈ ಕುರಿತು ನಾನೂ ಕೂಡ ಶಾಸಕರ ಜತೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಇಲ್ಲವಾದಲ್ಲಿ ಬಂದ ಅನುದಾನ ಕೂಡ ಬೇರೆ ಕಡೆಗೆ ಸ್ಥಳಾಂತರವಾಗುವ ಸಾಧ್ಯತೆ ಇದೆ. ಡಿಸಿ ಮನ್ನಾ ಭೂಮಿ ಹಂಚಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಪ್ರಸ್ತುತ ಜಾಗ ಕಡಿಮೆ ಇದ್ದು, ಬಂದಿರುವ ಅರ್ಜಿಗಳು ಹೆಚ್ಚಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಅದರ ಕುಸಿತು ಚರ್ಚಿಸಿ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಸ್ಥಳೀಯಾಡಳಿತಗಳ ಚುನಾವಣೆ ನಡೆಸುವ ಕುರಿತು ಸರಕಾರ ತೀರ್ಮಾನ ಕೈಗೊಳ್ಳಲಿದ್ದು, ತಾ.ಪಂ, ಜಿ.ಪಂ. ಹಾಗೂ ನಗರ ಸ್ಥಳೀಯಾಡಳಿತದ ಚುನಾವಣೆಗಳು ಪಕ್ಷದ ಚಿಹ್ನೆಯಡಿ ನಡೆಯುತ್ತಿದ್ದು, ಗ್ರಾ.ಪಂ.ಚುನಾವಣೆ ಪಕ್ಷ ರಹಿತವಾಗಿ ನಡೆಯುತ್ತದೆ. ಹೀಗಾಗಿ ಅವುಗಳನ್ನು ಒಟ್ಟಿಗೆ ನಡೆಸಬೇಕಾ ಅಥವಾ ಪ್ರತ್ಯೇಕ ನಡೆಸಬೇಕಾ ಎಂಬ ಚರ್ಚೆಗಳಿದ್ದು, ಅದರ ಕುರಿತು ಗ್ರಾಮೀಣಾಭಿವೃದ್ಧಿ ಸಚಿವರ ಜತೆ ಚರ್ಚಿಸಲಾಗುವುದು. ಚುನಾವಣೆಗೆ ಸಂಬಂಧಿಸಿ ಶೀಘ್ರ ನಿರ್ಧಾರ ಹೊರ ಬೀಳಲಿದೆ ಎಂದರು.
ಈ ಸಂದರ್ಭದಲ್ಲಿ ಮೆಸ್ಕಾಂ ಅಧ್ಯಕ್ಷ ಹರೀಶ್‌ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಜತೆಗಿದ್ದರು.
