February 4, 2026
cattle-save-issue-gang-arrest

ಮೈಸೂರು: ಜಾನುವಾರು ಸಂರಕ್ಷಣೆ ಹೆಸರಲ್ಲಿ ಹಣ ವಸೂಲಿಗಿಳಿದಿದ್ದ ಹಿಂದೂ ರಾಷ್ಟ್ರ ರಕ್ಷಣಾ ಪಡೆಯ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣನನ್ನು ಮೈಸೂರಿನ ಹುಣಸೂರು ಪೊಲೀಸರು ಬಂಧಿಸಿದ್ದಾರೆ.

ಈತನ ಜೊತೆಗೆ ಮಹಿಳೆ ಸೇರಿದಂತೆ ಏಳು ಮಂದಿಯನ್ನು ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಎರಡು ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕಟ್ಟೆಮಳಲವಾಡಿಯಲ್ಲಿ ಈ ಘಟನೆ ನಡೆದಿದೆ. ಹಿಂದೂ ಸಂಘಟನೆ ಹೆಸರಿನಲ್ಲಿ ಜಾನುವಾರು ಸಂರಕ್ಷಣೆ ಮಾಡುವ ನೆಪದಲ್ಲಿ ಈ ಗ್ಯಾಂಗ್ ಜಾನುವಾರು ಸಾಗಿಸುವ ವಾಹನಗಳ ತಡೆದು ಹಣ ವಸೂಲಿ ಮಾಡುತ್ತಿತ್ತು ಎಂಬ ಆರೋಪವಿದೆ.

ತಾಲೂಕಿನ ರತ್ನಪುರಿಯ ಕಿರಣ್ ಬುಧವಾರ ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಸಂತೆಯಲ್ಲಿ ಮೂರು ಜಾನುವಾರುಗಳನ್ನು ಖರೀದಿಸಿ ವಾಹನದಲ್ಲಿ ಸಾಗಿಸುತ್ತಿದ್ದ. ಈ ವೇಳೆ ಕಾರಿನಲ್ಲಿ ಹಿಂಬಾಲಿಸಿಕೊಂಡು ತಾಲೂಕಿನ ಕಟ್ಟೆಮಳಲವಾಡಿ ಬಳಿ ಅಡ್ಡಗಟ್ಟಿ ಕಸಾಯಿಖಾನೆಗೆ ಜಾನುವಾರು ಸಾಗಿಸುತ್ತಿದ್ದೀರಾ ಎಂದು ಚಾಲಕ ಕಿರಣ್‌ಗೆ ಬೆದರಿಸಿ 25 ಸಾವಿರ ರೂ. ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು.

ನಾನು ವ್ಯವಸಾಯಕ್ಕಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದೇನೆಂದು ಹೇಳಿದನಾದರೂ ಕೇಳದೆ ಕೊನೆಗೆ 20 ಸಾವಿರ ಕೊಟ್ಟರೆ ಬಿಡುತ್ತೇವೆ ಎಂದು ಧಮ್ಕಿ ಹಾಕಿದ್ದಾರೆ. ಈ ವೇಳೆ ಏನು ನಡೆಯುತ್ತಿದೆ ಎಂದು ರಸ್ತೆಯಲ್ಲಿ ಹೋಗುತ್ತಿದ್ದ ಜನರು ಗಮನಿಸಿ ಆರೋಪಿಗಳ ವಿರುದ್ಧ ತಿರುಗಿ ಬಿದ್ದು, ತರಾಟೆಗೆ ತೆಗೆದುಕೊಂಡು ಗೂಸಾ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಇವರ ಆಟಾಟೋಪ ಬಯಲಾಗಿದೆ. ಈ ಸಂಬಂಧ ಕಿರಣ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.