ಬೆಂಗಳೂರು, : ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾನುವಾರ 6 ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನು ನೇಮಕ ಮಾಡಿದ್ದಾರೆ. ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಸಿ. ಎಚ್. ವಿಜಯಶಂಕರ್ ಸಹ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.
ಭಾನುವಾರ ಈ ಕುರಿತು ರಾಷ್ಟ್ರಪತಿ ಭವನದ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ. ಸಿ. ಎಚ್. ವಿಜಯಶಂಕರ್ ಅವರನ್ನು ಮೇಘಾಲಯ ರಾಜ್ಯದ ರಾಜ್ಯಪಾಲರಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಸಿ. ಎಚ್. ವಿಜಯಶಂಕರ್ ಅವರ ಪೂರ್ಣ ಹೆಸರು ಚಂದ್ರಶೇಖರ್ ಹೆಚ್. ವಿಜಯಶಂಕರ್. 1956ರ ಅಕ್ಟೋಬರ್ 21ರಂದು ಅವರು ಜನಿಸಿದರು. ಮೂಲತಃ ರಾಣೆಬೆನ್ನೂರಿನವರಾದ ಅವರು ರಾಜಕೀಯ ನೆಲೆ ಕಂಡುಕೊಂಡಿದ್ದು ಮೈಸೂರಿನಲ್ಲಿ.
ಸಿ. ಎಚ್. ವಿಜಯಶಂಕರ್ 1998ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸಿ ಸಂಸದರಾಗಿ ಆಯ್ಕೆಯಾದರು. 2004ರ ಲೋಕಸಭೆ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು, 316,442 ಮತಗಳನ್ನು ಪಡೆದು ಜೆಡಿಎಸ್‌ನ ಎ. ಎಸ್. ಗುರುಸ್ವಾಮಿ ಸೋಲಿಸಿ ಸಂಸದರಾಗಿ 2ನೇ ಬಾರಿಗೆ ಆಯ್ಕೆಯಾದರು.
ಆದರೆ 2009ರ ಲೋಕಸಭೆ ಚುನಾವಣೆಯಲ್ಲಿ ಸಿ. ಎಚ್. ವಿಜಯಶಂಕರ್, ಬಿಜೆಪಿ ಅಭ್ಯರ್ಥಿಯಾಗಿ ಮೈಸೂರು-ಕೊಡಗು ಕ್ಷೇತ್ರದಿಂದ ಕಣಕ್ಕಿಳಿದು 3,47,119 ಮತಗಳನ್ನು ಪಡೆದು, ಕಾಂಗ್ರೆಸ್‌ನ ಎಚ್. ವಿಶ್ವನಾಥ್ ವಿರುದ್ಧ ಸೋಲು ಕಂಡರು.
2014ರ ಲೋಕಸಭೆ ಚುನಾವಣೆಯಲ್ಲಿ ಸಿ. ಎಚ್. ವಿಜಯಶಂಕರ್ ಅವರನ್ನು ಬಿಜೆಪಿ ಹಾಸನ ಕ್ಷೇತ್ರದಿಂದ ಕಣಕ್ಕಿಳಿಸಿತು. 1,65,688 ಮತಗಳನ್ನು ಪಡೆದ ಅವರು ಜೆಡಿಎಸ್‌ನ ಎಚ್. ಡಿ. ದೇವೇಗೌಡರ ವಿರುದ್ಧ ಸೋತರು, ಚುನಾವಣೆಯಲ್ಲಿ 3ನೇ ಸ್ಥಾನವನ್ನು ಪಡೆದರು.
ಸಿ. ಎಚ್. ವಿಜಯಶಂಕರ್ ಕುರುಬ ಸಮುದಾಯದ ನಾಯಕರು. ಸಜ್ಜನ ರಾಜಕಾರಣಿಯಾದ ಅವರು, ಒಂದು ಕಾಲದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರಾಗಿದ್ದವರು. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಅವರಿಗೆ 2019ರ ಲೋಕಸಭೆ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೊಡಿಸಿದ್ದರು ಸಿದ್ದರಾಮಯ್ಯ. ಆದರೆ ಚುನಾವಣೆಯಲ್ಲಿ ವಿಜಯಶಂಕರ್ 550,327 ಮತಗಳನ್ನು ಪಡೆದು, ಬಿಜೆಪಿಯ ಪ್ರತಾಪ್ ಸಿಂಹ ವಿರುದ್ಧ ಸೋಲು ಕಂಡರು.
