February 3, 2026
IMG-20260129-WA0030

ಮಂಗಳೂರು: ಪವಿತ್ರ ಕುರಾನ್ ಪಠಣದ ಮಹತ್ವವನ್ನು ಯುವಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಮಂಗಳೂರಿನಲ್ಲಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕುರಾನ್ ಕಿರಾತ್ ರಾಷ್ಟ್ರಮಟ್ಟದ ಸ್ಪರ್ಧೆ ನಡೆಯಿತು.

ರಾಷ್ಟ್ರಮಟ್ಟದ ಸ್ಪರ್ಧೆಗೆ ದೇಶಾದ್ಯಂತ ಭಾರಿ ಸ್ಪಂದನೆ ದೊರಕಿದ್ದು, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಒಟ್ಟು 2,252 ಮಂದಿ ಸ್ಪರ್ಧಿಗಳು ಆನ್‌ಲೈನ್ ಮೂಲಕ ತಮ್ಮ ಕಿರಾತ್ ವಿಡಿಯೋಗಳನ್ನು ಕಳುಹಿಸಿದ್ದರು. ಅವುಗಳಲ್ಲಿ ತಾಂತ್ರಿಕ ಪರಿಶೀಲನೆ ಮತ್ತು ತಜ್ಞ ನ್ಯಾಯಾಧೀಶರ ಮೌಲ್ಯಮಾಪನದ ಬಳಿಕ 50 ಸ್ಪರ್ಧಿಗಳನ್ನು ಅಂತಿಮ ಹಂತಕ್ಕೆ ಆಯ್ಕೆ ಮಾಡಲಾಗಿತ್ತು. ಈ ಆಯ್ಕೆಯಾದ ಸ್ಪರ್ಧಿಗಳು ಮಂಗಳೂರಿನ ಇಂಡಿಯನ್ ಕನ್ವೆನ್ಶನ್ ಹಾಲ್‌ನಲ್ಲಿ ನಡೆದ ಅಂತಿಮ ಹಂತದ ಸ್ಪರ್ಧೆಯಲ್ಲಿ ಪಾಲ್ಗೊಂಡರು.

ಕುರಾನ್ ಕಿರಾತ್ ಸ್ಪರ್ಧೆಯಲ್ಲಿ ಭಾಗವಹಿಸಲೆಂದೇ ದುಬೈ, ಕತಾರ್‌ನಿಂದಲೂ ಸ್ಪರ್ಧಿಗಳು ಭಾಗವಹಿಸಿದ್ದಾರೆ. ದುಬೈ ಮತ್ತು ಕತಾರ್‌ನಲ್ಲಿ ನೆಲೆಸಿರುವ ಭಾರತೀಯ ಮಕ್ಕಳು ದುಬಾರಿ ವಿಮಾನ ಖರ್ಚು ಭರಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಅದೇ ರೀತಿ ಹೈದರಾಬಾದ್ ನಿಂದ ಸ್ಪರ್ಧಿಯ ಕುಟುಂಬವೊಂದು ಬಂದದ್ದೂ ವಿಶೇಷವಾಗಿತ್ತು.

ಸ್ಪರ್ಧೆಯಲ್ಲಿ ಪಾಲ್ಗೊಂಡವರು ಕರ್ನಾಟಕ, ಕೇರಳ, ಗೋವಾ, ತೆಲಂಗಾಣ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಂದ ಆಗಮಿಸಿದ್ದರು. ಮೈಸೂರು, ಹೈದರಾಬಾದ್, ಕೇರಳ, ಗೋವಾ ಸೇರಿದಂತೆ ವಿವಿಧ ಪ್ರದೇಶಗಳಿಂದ ಬಂದ ವಿದ್ಯಾರ್ಥಿಗಳು ತಮ್ಮ ಶ್ರದ್ಧೆ, ಶಿಸ್ತು ಹಾಗೂ ಶುದ್ಧ ಉಚ್ಚಾರಣೆಯೊಂದಿಗೆ ಕುರಾನ್ ಕಿರಾತ್‌ ಪ್ರಸ್ತುತಪಡಿಸಿದರು. ಮಂಗಳೂರಿನಿಂದ ಮಾತ್ರ 15 ಮಂದಿ ಸ್ಪರ್ಧಿಗಳು ಟಾಪ್ 50 ಪಟ್ಟಿಗೆ ಆಯ್ಕೆಯಾಗಿರುವುದು ಗಮನಾರ್ಹವಾಗಿದೆ.

ಡಾ.ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್ ಕಳೆದ ಹತ್ತು ವರ್ಷಗಳಿಂದ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಶಿಕ್ಷಣ, ಆರೋಗ್ಯ, ನೀರು ಸಮಸ್ಯೆ ಪರಿಹಾರ, ಅನಾಥರು ಹಾಗೂ ಮಕ್ಕಳ ನೆರವು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದೆ. ಈ ಟ್ರಸ್ಟ್‌ ಈ ಮೊದಲು 3 ಬಾರಿ ವಿದೇಶದಲ್ಲಿ ಆಯೋಜಿಸಿದ್ದ ಕುರಾನ್ ಕಿರಾತ್ ಪಠಣ ಸ್ಪರ್ಧೆಯನ್ನು 10ನೇ ವಾರ್ಷಿಕೋತ್ಸವದ ಅಂಗವಾಗಿ ಈ ಬಾರಿ ವಿಶೇಷವಾಗಿ ಭಾರತದಲ್ಲೇ, ಅದರಲ್ಲೂ ಡಾ.ಅಬ್ದುಲ್ ಶಕೀಲ್ ಅವರ ಹುಟ್ಟೂರಾದ ಮಂಗಳೂರಿನಲ್ಲಿ ಈ ರಾಷ್ಟ್ರಮಟ್ಟದ ಕಿರಾತ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಅಂತಿಮ ಸ್ಪರ್ಧೆಯಲ್ಲಿ ಸಮಯ ಮಿತಿ ಮೂರು ಪ್ಲಸ್ ಮೂರು ನಿಮಿಷಗಳಾಗಿತ್ತು. ಮೊದಲ ಎರಡು ನಿಮಿಷ ಫಜರ್ ಪಠಣ, ಒಂದು ನಿಮಿಷ ವಿರಾಮ, ನಂತರ ಸೂರಾ ಅರ್-ರಹ್ಮಾನ್ ಪಠಣಕ್ಕೆ ಮತ್ತೆ ಮೂರು ನಿಮಿಷ ಅವಕಾಶ ಇತ್ತು. ದೇಶದಾದ್ಯಂತ 2,252 ಮಂದಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅವರಲ್ಲಿ 50 ಮಂದಿ ಇಲ್ಲಿ ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದರು. ಅದರಲ್ಲಿ ಟಾಪ್ 10 ಫೈನಲಿಸ್ಟ್‌ಗಳ ಆಯ್ಕೆ ಮಾಡಿ ಸ್ಪರ್ಧೆ ನಡೆಸಲಾಗಿದೆ.