ಮಂಗಳೂರು: ಬೈಕ್ ಸಹಸವಾರೆಯ ಸಾವಿಗೆ ಕಾರಣನಾದ ಕಾರು ಚಾಲಕನಿಗೆ ಮಂಗಳೂರಿನ ಜೆಎಂಎಫ್ ಸಿ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ನಗರದ ಲಾಲ್ ಭಾಗ್ ನಿವಾಸಿ ದೀಪಕ್ ಆರ್ (57) ಶಿಕ್ಷೆಗೊಳಗಾದ ಆರೋಪಿ. ರಿಯಾ ಆ್ಯಂಟನಿ ಮೃತಪಟ್ಟವರು.
ಪ್ರಕರಣದ ವಿವರ
2022ರ ಸೆ.3ರಂದು ರಿಯಾ ಆ್ಯಂಟನಿ ಅವರು ಅಕಾಶ್ ಅಜಯ್ ಅವರ ಜತೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಆರೋಪಿ ದೀಪಕ್ ಆರ್ ಕಾರನ್ನು ಮಣ್ಣಗುಡ್ಡ ಕಡೆಯಿಂದ ಗಾಂಧಿನಗರ ಕಡೆಗೆ ತೀರಾ ನಿರ್ಲಕ್ಷ್ಯದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಹೆರಿಟೇಜ್ ಅಪಾರ್ಟ್ ಮೆಂಟ್ ಬಳಿ ತಲುಪುವಾಗ ಬೈಕ್ ಗೆ ಢಿಕ್ಕಿಪಡಿಸಿದ್ದ. ಪರಿಣಾಮವಾಗಿ ಆಕಾಶ್ ಅಜಯ್ ಮತ್ತು ರಿಯಾ ಆ್ಯಂಟನಿ ಅವರು ಬೈಕ್ ಸಮೇತ ರಸ್ತೆಗೆ ಬಿದ್ದಿದ್ದರು. ಆಕಾಶ್ ಅಜಯ್ ಅವರಿಗೆ ಬಲಕೈ ಮತ್ತು ಗದ್ದಕ್ಕೆ ಗಾಯವಾಗಿತ್ತು. ಸಹ ಸವಾರೆ ರಿಯಾ ಆ್ಯಂಟನಿ ಅವರ ತಲೆಗೆ ಗಂಭೀರ ಗಾಯವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಸೆ.12ರಂದು ಮೃತಪಟ್ಟಿದ್ದರು. ಈ ಬಗ್ಗೆ ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
