May 19, 2026
pharmacies-wednesday-wednesday-nationwide-hindustan-chemists-supporting_c60ef4ac-72a8-11e5-a2be-bd52c89c4a35

ಬೆಂಗಳೂರು: ರಾಜ್ಯದ ಜನ್ರೇ ಒಮ್ಮೆ ಇಲ್ಲಿ ಗಮನಿಸಿ. ಮೆಡಿಕಲ್ ಗಳಲ್ಲಿ ಅಗತ್ಯ ಔಷಧಿಗಳು ಏನಾದ್ರೂ ಖರೀದಿ ಮಾಡೋದಿದ್ರೆ ಇಂದು ಖರೀದಿಸಿ. ನಾಳೆ ರಾಜ್ಯದಾದ್ಯಂತ ಮೆಡಿಕಲ್ ಶಾಪ್‌ಗಳು ಬಂದ್ ಆಗಲಿವೆ.

ಬ್ಲಿಂಕಿಟ್, ಸ್ವಿಗ್ಗಿ, ಜೋಮಾಟೋ ಇತರೆ ಆನ್‌ಲೈನ್ ಮೂಲಕ ಔಷಧಿಗಳ ಖರೀದಿ ಮಾರಾಟ ನಿಲ್ಲಿಸುವಂತೆ ಆಗ್ರಹಿಸಿ, ಅಖಿಲ ಭಾರತ ಔಷಧಿ ವ್ಯಾಪರಿಗಳ ಸಂಘದಿಂದ ದೇಶದಾದ್ಯಂತ ಮೆಡಿಕಲ್ ಬಂದ್‌ಗೆ ಕರೆ ಕೊಟ್ಟಿದೆ. ಈ ಹಿನ್ನೆಲೆ ಕರ್ನಾಟಕದಲ್ಲೂ ಬಂದ್‌ಗೆ ಬೆಂಬಲಿಸಿ ಮೆಡಿಕಲ್‌ಗಳನ್ನ ಕ್ಲೋಸ್ ಮಾಡಲಿದ್ದಾರೆ.

ಕರ್ನಾಟಕದಲ್ಲಿಯೂ ಒಂದು ದಿನದ ಮಟ್ಟಿಗೆ ಸಂಪೂರ್ಣವಾಗಿ ಮೆಡಿಕಲ್‌ಗಳನ್ನ ಮುಚ್ಚಲು, ಕರ್ನಾಟಕ ಔಷಧಿ ಮಾರಾಟ ವ್ಯಾಪಾರಿಗಳ ಸಂಘದಿಂದ ಕರೆ ಕೊಡಲಾಗಿದೆ. ರಾಜ್ಯದಲ್ಲಿ 26,000 ಕ್ಕೂ ಹೆಚ್ಚು ಮೆಡಿಕಲ್‌ಗಳಿದ್ದು, 20ನೇ ತಾರೀಖು ರಾತ್ರಿ 12 ಘಂಟೆ 1 ನಿಮಿಷದಿಂದ ರಾತ್ರಿ 11 ಘಂಟೆ 59 ನಿಮಿಷದವರೆಗೆ ಬಂದ್‌ಗೆ ಕರೆ ನೀಡಲಾಗಿದೆ. ವಿವಿಧ ಆಪ್‌ಗಳಿಂದ ಔಷಧಿಗಳ ಮಾರಾಟ ಆಗ್ತಿದ್ದು, ಇದು ನೋಂದಣಿ ಪಡೆದ ಮೆಡಿಕಲ್ ಮಾಲೀಕರಿಗೆ ಹೊಡೆತ ಬೀಳ್ತಿದೆ ಅಂತ ಮೆಡಿಕಲ್ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.

ಆನ್‌ಲೈನ್‌ನಲ್ಲಿ ಔಷಧಿ ಮಾರಾಟಕ್ಕೆ ಕೇಂದ್ರ ಸರ್ಕಾರ ಕೋವಿಡ್ ಸಮಯದಲ್ಲಿ ಅನುಮತಿಯನ್ನ ನೀಡಲಾಗಿತ್ತು. ಅದನ್ನೇ ಮುಂದುವರೆಸಿದ ಕೆಲ ಆಪ್ ಆಧಾರಿತ ಕಂಪನಿಗಳು ಇದನ್ನೇ ಬ್ಯುಸಿನೆಸ್‌ ಮಾಡಿಕೊಂಡಿವೆ. ಇದಕ್ಕೆ ಕಡಿವಾಣ ಹಾಕುವಂತೆ ಕೇಂದ್ರ ಸರ್ಕಾರಕ್ಕೂ ಮನವಿ ಮಾಡಲಾಗಿತ್ತು. ಆದ್ರೂ ಯಾವ್ದೇ ಪ್ರಯೋಜನ ಆಗದ ಹಿನ್ನಲೆ, ದೇಶದ್ಯಾಂತ ಇರುವ 12.4 ಲಕ್ಷಕ್ಕೂ ಅಧಿಕ ಮೆಡಿಕಲ್‌ಗಳ ಬಂದ್ ಕರೆ ನೀಡಲಾಗಿದೆ.

ಆನ್‌ಲೈನ್‌ನಲ್ಲಿ ಮೆಡಿಸಿನ್ ಮಾರಾಟದಿಂದ ಸಮಸ್ಯೆ..?

  • ನಿಯಂತ್ರಣವಿಲ್ಲದ ಆನ್‌ಲೈನ್ ಔಷಧ ಮಾರಾಟ
  • ನಕಲಿ ಔಷಧಿ ಚೀಟಿಗಳ ಬಳಕೆ
  • ಆಂಟಿಬಯೋಟಿಕ್ ಮತ್ತು ಚಟ ಉಂಟುಮಾಡುವ ಔಷಧಿಗಳ ದುರುಪಯೋಗ
  • ರೋಗಿ ಮತ್ತು ಫಾರ್ಮಸಿಸ್ಟ್ ನಡುವೆ ನೇರ ಸಂಪರ್ಕದ ಕೊರತೆ
  • ನಕಲಿ ಮತ್ತು ಸರಿಯಾಗಿ ಸಂಗ್ರಹಿಸದ ಔಷಧಿಗಳ ಅಪಾಯ
  • ಅತಿಯಾದ ಡಿಸ್ಕೌಂಟ್ ನೀತಿಯಿಂದಲೂ ಸಮಸ್ಯೆ
  • ಭಾರೀ ರಿಯಾಯಿತಿಯಿಂದ ಸಣ್ಣ ವ್ಯಾಪಾರಿಗಳಿಗೆ ಅಪಾಯ
  • ಮಾರುಕಟ್ಟೆಯಲ್ಲಿ ಏಕಾಧಿಪತ್ಯ ಭೀತಿ ಎದುರಾಗಿದೆ.

ಪ್ರಮುಖ ಬೇಡಿಕೆಗಳು ಏನು..?

  • ಜಿಎಸ್‌ಆರ್ 220 (ಇ) ಹಿಂಪಡೆಯಬೇಕು
  • ಜಿಎಸ್‌ಆರ್ 817 (ಇ) ಹಿಂಪಡೆಯಬೇಕು
  • ಅಕ್ರಮ ಇ-ಫಾರ್ಮಸಿಗಳನ್ನು ಬಂದ್ ಮಾಡಬೇಕು
  • ಅತಿಯಾದ ಡಿಸ್ಕೌಂಟ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು
  • ಸಣ್ಣ ಔಷಧಿ ವ್ಯಾಪಾರಿಗಳನ್ನು ರಕ್ಷಿಸಬೇಕು
  • ಎಂಬ ಬೇಡಿಕೆಗಳನ್ನು ಇಟ್ಟಿದ್ದಾರೆ.

ಇನ್ನೂ, ಅಗತ್ಯ ಸೇವೆಗಳಡಿ ಮೆಡಿಕಲ್ ಸರ್ವಿಸ್ ಬಂದ್ರೂ, ಮೆಡಿಕಲ್ ಮಾಲೀಕರ ಬದುಕಿನ ಪ್ರಶ್ನೆ ಇದಾಗಿದೆ. ಸರ್ಕಾರದಿಂದ ಲೈಸನ್ಸ್ ಪಡೆದು, ಔಷಧಿಗಳ ಪೂರೈಕೆ ಮಾಡ್ತಾರೆ. ಆದ್ರೆ ಆಪ್ ಆಧಾರಿತ ಕಂಪನಿಗಳು ಸರ್ಕಾರದ ಯಾವ್ದೇ ಅನುಮತಿ ಪಡೆಯದೇ, ಅಕ್ರಮವಾಗಿ ಔಷಧಿಗಳನ್ನ ಸಂಗ್ರಹಿಸಿ, ಆನ್ ಲೈನ್ ಡೆಲಿವರಿ ಮೂಲಕ ಮಾರಾಟ ಮಾಡಲಾಗ್ತಿದೆ. ಇದು ರೋಗಿಯ ಜೀವಕ್ಕೂ ಅಪಾಯ. ಕೂಡಲೇ ಕೇಂದ್ರ, ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕೆಂದು ಔಷಧಿ ಮಾರಾಟ ವ್ಯಾಪಾರಿಗಳು ಒತ್ತಾಯ ಮಾಡ್ತಿವೆ. ಇದೇ ಮೊದಲ ಬಾರಿಗೆ ಮೆಡಿಕಲ್‌ಗಳು ಬಂದ್ ಆಗ್ತಿದ್ದು, ಜನರ ಮೇಲೆ ಎಷ್ಟು ಪರಿಣಾಮ ಬೀಳಲಿದೆ ಕಾದು ನೋಡಬೇಕಿದೆ.