ಮಂಗಳೂರು: ಕಾರವಾರ – ಮಂಗಳೂರು – ಬೆಂಗಳೂರು ಮಧ್ಯೆ ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕೆಲವು ಮಹಿಳೆಯರು ಸೇರಿ ಸಹಜ ಹೆರಿಗೆ ಮಾಡಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ರವಿವಾರ ಮುಸ್ಸಂಜೆ ಬಂಟ್ವಾಳ ಸಮೀಪದ ಬಿ.ಸಿ.ರೋಡ್ ಬಳಿ ಈ ವಿದ್ಯಮಾನ ನಡೆದಿದೆ.
ಮಂಗಳೂರು ಜಂಕ್ಷನ್‌ನಿಂದ ಹೊರಟ ರೈಲಿನಲ್ಲಿ ಮೈಸೂರು ಮೂಲದ ತುಂಬು ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿತ್ತು. ರೈಲು ಬಿ.ಸಿ.ರೋಡ್ ತಲುಪಿದಾಗ ಗರ್ಭಿಣಿಗೆ ತೀವ್ರ ರಕ್ತಸ್ರಾವವೂ ಆಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಹಾಗೇ ಸುಮಾರು 30 ನಿಮಿಷಗಳ ಕಾಲ ವೈದ್ಯರಿಗಾಗಿ ಕಾಯಲಾಯಿತು. ಆದರೆ ಸಕಾಲಕ್ಕೆ ವೈದ್ಯಕೀಯ ಚಿಕಿತ್ಸೆ ಲಭಿಸದ ಕಾರಣ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕೆಲವು ಮಹಿಳೆಯರು ಕಾರ್ಯಪ್ರವೃತ್ತರಾಗಿ ಸಹಜ ಹೆರಿಗೆ ಮಾಡಿಸಿದರು ಎಂದು ತಿಳಿದು ಬಂದಿದೆ.
ತುರ್ತು ಪರಿಸ್ಥಿತಿಯಲ್ಲಿ ಧೈರ್ಯ ತೋರಿದ ಇಬ್ಬರು ಮುಸ್ಲಿಮ್ ಮಹಿಳೆಯರು: ಕಿಶನ್
‘‘ತುಂಬು ಗರ್ಭಿಣಿಯ ಸ್ಥಿತಿಯನ್ನು ಗಮನಿಸಿದ ರೈಲಿನಲ್ಲೇ ಇದ್ದ ಇಬ್ಬರು ಮುಸ್ಲಿಮ್ ಮಹಿಳೆಯರು ಧೈರ್ಯದಿಂದಲೇ ಹೆರಿಗೆ ಮಾಡಿಸಲು ಮುಂದಾದರು. ತಕ್ಷಣ ಅವರು ರೈಲಿನ ಬೋಗಿಗೆ ಪರದೆ ಕಟ್ಟಿ ಹೆರಿಗೆಗಾಗಿ ಪ್ರಯತ್ನಿಸಿದರು. ರಕ್ತಸ್ರಾವವಾಗುತ್ತಿದ್ದರೂ ಧೃತಿಗೆಡದೆ ಪ್ರಯತ್ನ ಮುಂದುವರಿಸಿದರು. ಅವರೊಂದಿಗೆ ರೈಲಿನಲ್ಲಿದ್ದ ಇತರ ಮಹಿಳೆಯರೂ ಸಹಕರಿಸಿದರು. ಕೊನೆಗೂ ಸಹಜ ಹೆರಿಗೆ ಮಾಡಿಸುವಲ್ಲಿ ಮಹಿಳೆಯರ ತಂಡ ಯಶಸ್ವಿಯಾಯಿತು. ಬಳಿಕ ತಾಯಿ-ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು’’ ಎಂದು ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಮಂಗಳೂರು ಮೂಲದ ಕಿಶನ್ ಎಂಬವರು ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದ್ದಾರೆ.
