ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯದ ದಿನವೇ 240ಕ್ಕೂ ಹೆಚ್ಚು ಸಿಸಿಟಿವಿ ಕೇಬಲ್‌ಗಳನ್ನು ಕತ್ತರಿಸಿದ ಆಘಾತಕಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಸ್ಪೋಟಕ ಮಾಹಿತಿಯೊಂದು ಹೊರಬಿದ್ದಿದೆ. ಈ ವಿಧ್ವಂಸಕ ಕೃತ್ಯದ ಹಿಂದೆ ಯಾವುದೇ ಸಂಚು ಅಥವಾ ಬೆಟ್ಟಿಂಗ್ ದಂಧೆಯ ಕೈವಾಡವಿಲ್ಲ, ಬದಲಾಗಿ ಕೇವಲ ‘ಸಂಬಳ ನೀಡದ’ ಕೋಪವಿತ್ತು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಕಳೆದ ಏಪ್ರಿಲ್ 24 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವೆ ಹೈ-ವೋಲ್ಟೇಜ್ ಐಪಿಎಲ್ ಪಂದ್ಯ ನಡೆದಿತ್ತು. ಈ ಪಂದ್ಯದ ಭದ್ರತೆಗಾಗಿ ನಿಯೋಜಿಸಲಾಗಿದ್ದ ಪ್ರಮುಖ ಸಿಸಿಟಿವಿ ಕ್ಯಾಮೆರಾಗಳ ಕೇಬಲ್‌ಗಳನ್ನು ಉದ್ದೇಶಪೂರ್ವಕವಾಗಿ ಕತ್ತರಿಸಿ ಹಾಳುಮಾಡಲಾಗಿತ್ತು. 35 ಸಾವಿರ ಪ್ರೇಕ್ಷಕರು ಸೇರುವ ಕ್ರೀಡಾಂಗಣದಲ್ಲಿ ಇಂತಹ ಕೃತ್ಯ ಎಸಗಿರುವುದು ಭಾರೀ ಭದ್ರತಾ ಲೋಪವನ್ನು ಎತ್ತಿ ತೋರಿಸಿತ್ತು.
ಸಂಬಳಕ್ಕಾಗಿ ಸೇಡು
ಈ ಕೃತ್ಯ ಎಸಗಿದ ಆರೋಪಿಗಳಾದ ಶ್ರೀನಿವಾಸ ಮತ್ತು ಅಬ್ದುಲ್ ಕಲಾಂ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ಇಬ್ಬರೂ ಆರೋಪಿಗಳು ಕ್ರೀಡಾಂಗಣದಲ್ಲಿ ಸಿಸಿಟಿವಿ ಮತ್ತು ಕೇಬಲ್ ಅಳವಡಿಕೆಯ ಸಬ್ ಕಾಂಟ್ರಾಕ್ಟ್ ಪಡೆದಿರುವ ‘ಐವಿಎಸ್ ಡಿಜಿಟಲ್ ಸೊಲ್ಯೂಷನ್ಸ್’ ಕಂಪನಿಯ ಸಿಬ್ಬಂದಿಯಾಗಿದ್ದರು.
ತನಿಖಾ ಮೂಲಗಳ ಪ್ರಕಾರ, ‘ಐವಿಎಸ್ ಡಿಜಿಟಲ್’ ಕಂಪನಿಯು ಈ ಇಬ್ಬರು ಸಿಬ್ಬಂದಿಗಳಿಗೆ ಕಳೆದ ಕೆಲ ತಿಂಗಳುಗಳಿಂದ ಸಂಬಳ ನೀಡಿರಲಿಲ್ಲ. ಸಂಬಳ ಕೇಳಿದರೂ ಸಿಗದಿದ್ದಕ್ಕೆ ಕೋಪಗೊಂಡ ಶ್ರೀನಿವಾಸ ಮತ್ತು ಅಬ್ದುಲ್ ಕಲಾಂ, ಕಂಪನಿಗೆ ಮತ್ತು ಕ್ರೀಡಾಂಗಣದ ಆಡಳಿತ ಮಂಡಳಿಗೆ ಪಾಠ ಕಲಿಸಲು ನಿರ್ಧರಿಸಿದ್ದರು.
ಹಳೆಯ ಕಾರ್ಡ್ ಬಳಸಿ ಪ್ರವೇಶ:
ಮಹತ್ವದ ಐಪಿಎಲ್ ಪಂದ್ಯ ನಡೆಯುವ ದಿನವನ್ನೇ ತಮ್ಮ ಸೇಡಿಗಾಗಿ ಆರಿಸಿಕೊಂಡ ಆರೋಪಿಗಳು, ನಿಷ್ಕ್ರಿಯಗೊಂಡ ಹಳೆಯ ಕಾರ್ಡ್ ಬಳಸಿಕೊಂಡು ಕ್ರೀಡಾಂಗಣವನ್ನು ಅನಧಿಕೃತವಾಗಿ ಪ್ರವೇಶಿಸಿದ್ದಾರೆ. ನಂತರ ಸಿಸಿಟಿವಿ ನಿಯಂತ್ರಣ ಕೊಠಡಿ ಮತ್ತು ಇತರ ಪ್ರಮುಖ ಸಂಪರ್ಕ ಕೇಂದ್ರಗಳನ್ನು ತಲುಪಿ 240ಕ್ಕೂ ಹೆಚ್ಚು ಕೇಬಲ್‌ಗಳನ್ನು ಕತ್ತರಿಸಿ ಸಿಸಿಟಿವಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದಾರೆ.
ಪೊಲೀಸ್ ತನಿಖೆ ಮತ್ತು ನೋಟಿಸ್:
ಈ ಗಂಭೀರವಾದ ವಿಧ್ವಂಸಕ ಕೃತ್ಯದ ಬಗ್ಗೆ ಕ್ರೀಡಾಂಗಣದ ತಾಂತ್ರಿಕ ತಂಡ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ, ಕೃತ್ಯ ಎಸಗಿದ ಶ್ರೀನಿವಾಸ ಮತ್ತು ಅಬ್ದುಲ್ ಕಲಾಂ ಇಬ್ಬರಿಗೂ ನೋಟಿಸ್ ನೀಡಿರುವ ಪೊಲೀಸರು ಅವರನ್ನು ವಿಚಾರಣೆಗೆ ಕರೆದಿದ್ದಾರೆ. ‘ಐವಿಎಸ್ ಡಿಜಿಟಲ್’ ಕಂಪನಿಯ ಆಡಳಿತ ಮಂಡಳಿಯನ್ನು ಸಹ ವಿಚಾರಣೆಗೆ ಒಳಪಡಿಸಿ ಸಂಬಳ ನೀಡದ ವಿಚಾರ ಮತ್ತು ಕ್ರೀಡಾಂಗಣದ ಒಳಗೆ ಹಳೆಯ ಕಾರ್ಡ್ ಬಳಸಿ ಅನಧಿಕೃತವಾಗಿ ಪ್ರವೇಶಿಸಿದ್ದು ಹೇಗೆ ಎನ್ನುವುದರ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
